ಗಂಗಾನದಿ ಕೊಳಕು ಎಂದು ತಿಳಿದ ಕಾರಣ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್
ಲಕ್ನೋ ಡಿಸೆಂಬರ್ 14: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಗಂಗಾ ನದಿ ಕೊಳಕು ಎಂದು ತಿಳಿದಿದ್ದರಿಂದ ಅದರಲ್ಲಿ ಸ್ನಾನ ಮಾಡಲಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ವ್ಯಂಗ್ಯವಾಡಿದ್ದಾರೆ. ಗಂಗಾ ಶುದ್ಧೀಕರಣಕ್ಕೆ ಬಿಜೆಪಿ ಕೋಟಿಗಟ್ಟಲೆ ಖರ್ಚು ಮಾಡಿದೆ. ಆದರೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಗಂಗಾ ನದಿ ಕೊಳಕು ಎಂಬುದು ಗೊತ್ತಿತ್ತು. ಅದಕ್ಕಾಗಿಯೇ ಅವರು ಸ್ನಾನ ಮಾಡಲಿಲ್ಲ ಎಂದು ಯಾದವ್ ಟೀಕಿಸಿದ್ದಾರೆ.
ಇಂದು ಇಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ವಾರಣಾಸಿಗೆ ಪ್ರಧಾನಿ ಮೋದಿಯವರ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ, "ಪ್ರಶ್ನೆ ಏನೆಂದರೆ, ಗಂಗಾ ಮಾತೆ ಎಂದಾದರೂ ಶುದ್ಧವಾಗುತ್ತಾಳೆಯೇ? ನಿಧಿಗಳು ಹರಿದುಹೋದವು, ಆದರೆ ನದಿಯನ್ನು ಸ್ವಚ್ಛಗೊಳಿಸಲಾಗಿಲ್ಲ" ಎಂದು ಯಾದವ್ ಆರೋಪ ಮಾಡಿದರು.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎರಡು ಪ್ರಮುಖ ಸ್ಪರ್ಧಿಗಳಾದ ಎಸ್‌ಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ದಾಳಿಯ ಸರಣಿಯಲ್ಲಿ ಈ ಹೇಳಿಕೆ ಇತ್ತೀಚಿನದು. ಈ ಹಿಂದೆ, ಜನರು ತಮ್ಮ ಅಂತಿಮ ದಿನಗಳನ್ನು ವಾರಣಾಸಿಯಲ್ಲಿ ಕಳೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ಅದು [ಬನಾರಸ್] ಉಳಿಯಲು ಒಂದು ಸ್ಥಳವಾಗಿದೆ. ಜನರು ತಮ್ಮ ಅಂತಿಮ ದಿನಗಳನ್ನು ಬನಾರಸ್‌ನಲ್ಲಿ ಕಳೆಯುತ್ತಾರೆ" ಎಂದಿದ್ದರು.

ಜೊತೆಗೆ ಪಿಎಂ ಮೋದಿ ಕೂಡ ಎಸ್‌ಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಂಪು (ಎಸ್‌ಪಿಯ ಟೋಪಿಯ ಬಣ್ಣ) ಯುಪಿಗೆ ಅಪಾಯವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
PM Narendra Modi takes holy dip in River Ganga at Varanasi pic.twitter.com/yGK9YRTCrO
— ANI UP (@ANINewsUP) December 13, 2021
ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಕಾಶಿ-ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದರು. ಈ ವೇಳೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಅವರ ಕಾರಿನ ಮೇಲೆಯೇ ಹೂವಿನ ಎಸಳುಗಳ ಸುರಿಮಳೆ ಸುರಿಸಲಾಯಿತು. ಸ್ಥಳೀಯರು ಮೋದಿ..ಮೋದಿ, ಹರಹರ ಮಹದೇವ್ ಎಂಬ ಘೋಷಣೆ ಕೂಗಿದರು. ಮೋದಿ ಅವರ ಈ ವಿಶೇಷ ಪೂಜೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜೊತೆಯಾಗಿದ್ದರು. ಎರಡು ದಿನಗಳ ಕಾಶಿ ಪ್ರವಾಸ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಶಿ-ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದರು. ಜೊತೆಗೆ ಲಲಿತ್ ಘಾಟ್ ಬಳಿ ಗಂಗಾನದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಿದರು. ಅದರ ವಿಡಿಯೋ ಈಗಾಗಲೇ ಸಿಕ್ಕಾಪಟೆ ವೈರಲ್ ಆಗಿದೆ.
ಕೇಸರಿ ಅಂಗಿ, ಪೈಜಾಮಾ ಮಾದರಿಯ ಪ್ಯಾಂಟ್ ಧರಿಸಿದ್ಧ ಪ್ರಧಾನಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನೂ ಹಾಕಿದ್ದರು. ನಂತರ ನದಿ ನೀರಿನಲ್ಲಿ ಇಳಿದು ಅದರಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಸೂರ್ಯದೇವನಿಗೆ ಪೂಜೆ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ 2019ರಲ್ಲಿ ಪ್ರಯಾಗ್ ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಮಾಡಿದ್ದರು. ಅಂದು ತ್ರಿವೇಣಿ ಘಾಟ್ನಲ್ಲಿ ಪವಿತ್ರ ಸ್ನಾನ ಮಾಡಿದ್ದ ಮೋದಿ ನಂತರ ಸಫಾಯಿ ಕರ್ಮಚಾರಿಗಳ ಪಾದ ತೊಳೆದು ಪೂಜೆ ಸಲ್ಲಿಸಿದ್ದರು. ನಿನ್ನೆ ಗಂಗಾನದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಿದರು. ಆದರೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಾತ್ರ ಗಂಗಾ ಪವಿತ್ರ ಸ್ನಾನ ಮಾಡಲಿಲ್ಲ. ಈ ಬಗ್ಗೆ ಅಖಿಲೇಶ್ ವ್ಯಂಗ್ಯವಾಡಿದ್ದಾರೆ. ಗಂಗಾನದಿ ನೀರು ಕೊಳಕು ಎಂದು ಸಿಎಂ ಯೋಗಿಗೆ ತಿಳಿದಿತ್ತು ಹೀಗಾಗಿ ಸ್ನಾನ ಮಾಡಿಲ್ಲ ಎಂದಿದ್ದಾರೆ. ಗಂಗಾ ಶುದ್ಧೀಕರಣಕ್ಕೆ ಬಿಜೆಪಿ ಕೋಟಿಗಟ್ಟಲೆ ಖರ್ಚು ಮಾಡಿದೆ. ಆದರೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಗಂಗಾ ನದಿ ಕೊಳಕು ಎಂಬುದು ಗೊತ್ತಿತ್ತು. ಅದಕ್ಕಾಗಿಯೇ ಅವರು ಸ್ನಾನ ಮಾಡಲಿಲ್ಲ ಎಂದು ಯಾದವ್ ಟೀಕಿಸಿದ್ದಾರೆ.












Click it and Unblock the Notifications