ಜಾತಿವಾದ ತೊರೆದು ಬಿಜೆಪಿ ಸೇರಲು ಇದು ಸಕಾಲ: ಶೋಭಾ ಕರೆ
ಲಕ್ನೋ, ಜನವರಿ 24: ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ ಪುರ್ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಸುಭಾಷ್ ರಾಯ್ ಅವರು ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
''ಅಖಂಡ ಭಾರತದಾದ್ಯಂತ ಬೀಸುತ್ತಿರುವ ರಾಷ್ಟ್ರೀಯತೆಯ ಬಿರುಗಾಳಿಗೆ, ಉತ್ತರ ಪ್ರದೇಶದಲ್ಲಿ ಜಾತಿವಾದವನ್ನು ತೊರೆದು ವಿಪಕ್ಷದ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ,'' ಎಂದು ಉತ್ತರ ಪ್ರದೇಶದ ಉಸ್ತುವಾರಿಗಳ ಪೈಕಿ ಒಬ್ಬರಾದ ಕೇಂದ್ರ ಸಚಿವೆ (ರಾಜ್ಯ ಖಾತೆ) ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಉತ್ತರ ಪ್ರದೇಶ ರಾಜ್ಯಾಧ್ಯಕ್ಷ ಸ್ವಾತಂತ್ರ್ಯ ದೇವ್ ಸಿಂಗ್, ಉಪ ಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಮತ್ತು ಉತ್ತರ ಪ್ರದೇಶ ಚುನಾವಣಾ ಸಹ ಪ್ರಭಾರಿ & ಕೇಂದ್ರ ಕೃಷಿ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ ಹಾಗೂ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸುಭಾಷ್ ರಾಯ್ ಅವರು ಬಿಜೆಪಿ ಸೇರ್ಪಡೆಗೊಂಡರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಜನಪರ ಯೋಜನೆ ಮತ್ತು ನಿಲುವುಗಳಿಂದ ಪ್ರಭಾವಿತರಾಗಿ, ಸುಭಾಷ್ ರಾಯ್ ಅವರು ಸಮಾಜವಾದಿ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಇವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉತ್ತರ ಪ್ರದೇಶದ ಅವಧ್ ಕ್ಷೇತ್ರದ ಚುನಾವಣಾ ಸಹ ಪ್ರಭಾರಿ, ಶೋಭಾ ಕರಂದ್ಲಾಜೆಯವರು ಪಕ್ಷಕ್ಕೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.
ಸುಭಾಷ್ ರಾಯ್ ಅವರ ಬಿಜೆಪಿ ಸೇರ್ಪಡೆಯು, ಅವಧ್ ಕ್ಷೇತ್ರದ ಅಂಬೇಡ್ಕರ ನಗರ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವೆ ಅಭಿಪ್ರಾಯ ಪಟ್ಟಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2021ರಲ್ಲಿ ಎದುರಾದ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿಯೂ ಈ ವರ್ಚುವಲ್ ಸಭೆಗಳು ಮತ್ತು ಪ್ರಚಾರದ ಬಗ್ಗೆ ಬಿಜೆಪಿಯು ತರಬೇತಿಯನ್ನು ಶುರು ಮಾಡಿಕೊಂಡಿತ್ತು. ಈ ತರಬೇತಿ ಹಂತದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸ್ಪೃತಿ ಇರಾನಿ ವರ್ಚುವಲ್ ಸಭೆಯ ನೇತೃತ್ವ ವಹಿಸಿಕೊಂಡಿದ್ದು, ಮೂರರಿಂದ ನಾಲ್ಕು ಬಾರಿ ನಡೆಸಿದ ಈ ಸಭೆಯಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗಿಯಾಗಿದ್ದರು ಎಂದು ಉತ್ತರ ಪ್ರದೇಶದ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಂಕಿತ್ ಚಂದೇಲ್ ಹೇಳಿದ್ದಾರೆ.
2022ರ ಚುನಾವಣೆಗೆ ಸಂಬಂಧಿಸಿದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಆಗುವವರೆಗೂ ಇದೇ ರೀತಿಯ ಪ್ರಚಾರ ಮುಂದುವರಿಯಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ಹೊತ್ತಿಗೆ ಬಿಜೆಪಿಯು ಈ ಸಾಲಿನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ನಂತರ ಮತ್ತೊಂದು ರೀತಿಯ ಪ್ರಚಾರ ವೈಖರಿ ಪ್ರಾರಂಭವಾಗಲಿದೆ. ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಮಾಡಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಲುಪಿಸಲಾಗುವುದು ಎಂದಿದ್ದಾರೆ.












Click it and Unblock the Notifications