ಯುಪಿ ಚುನಾವಣೆ: 148 ಕೋಟಿ ರೂ. ಆಸ್ತಿ ಘೋಷಿಸಿದ ಬಿಜೆಪಿ ಅಭ್ಯರ್ಥಿ!
ಲಕ್ನೋ, ಫೆಬ್ರವರಿ 3: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಶ್ರೀಮಂತ ಅಭ್ಯರ್ಥಿಯು 148 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಇಬ್ಬರು ಅಭ್ಯರ್ಥಿಗಳು ತಾವು ಯಾವುದೇ (ಶೂನ್ಯ) ಆಸ್ತಿಯನ್ನು ಹೊಂದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಶೂನ್ಯ ಆಸ್ತಿ ಹೊಂದಿರುವವರನ್ನು ಹೊರತುಪಡಿಸಿ ಮೂವರು ಅಭ್ಯರ್ಥಿಗಳಲ್ಲಿ ಇಬ್ಬರು ಕೇವಲ 1000 ರೂಪಾಯಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರೆ, ಒಬ್ಬರು 10,000 ರೂಪಾಯಿ ಹೊಂದಿದ್ದಾರೆ ಎಂದು ಪ್ರಜಾಸತ್ತಾತ್ಮಕ ಸುಧಾರಣಾ ಸಮಿತಿ(ಎಡಿಆರ್) ತಿಳಿಸಿದೆ.
ಉತ್ತರ ಪ್ರದೇಶ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರತಿ ಅಭ್ಯರ್ಥಿಯ ಆಸ್ತಿಯ ಸರಾಸರಿ ಮೌಲ್ಯ 3.72 ಕೋಟಿ ರೂಪಾಯಿ ಎಂದು ನಾಮನಿರ್ದೇಶಿತರ ಸ್ವಯಂ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಿದ ವರದಿಯಲ್ಲಿ ತಿಳಿಸಿದೆ.

ಯಾವ ಪಕ್ಷದ ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?:
ಉತ್ತರ ಪ್ರದೇಶದ ಪ್ರಮುಖ ಪಕ್ಷಗಳಲ್ಲಿ, ಎಡಿಆರ್ ವಿಶ್ಲೇಷಿಸಿದ 28 ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಆಸ್ತಿಯ ಸರಾಸರಿ ಮೌಲ್ಯ 13.23 ಕೋಟಿ ರೂಪಾಯಿ ಆಗಿದೆ. ಅದೇ ರೀತಿ 57 ಬಿಜೆಪಿ ಅಭ್ಯರ್ಥಿಗಳ ಆಸ್ತಿ ಮೌಲ್ಯ 12.01 ಕೋಟಿ ರೂಪಾಯಿ, 29 ರಾಷ್ಟ್ರೀಯ ಲೋಕ ದಳ ಪಕ್ಷದ ಅಭ್ಯರ್ಥಿಗಳ ಆಸ್ತಿ ಮೌಲ್ಯ 8.32 ಕೋಟಿ ರೂಪಾಯಿ, 56 ಬಿಎಸ್‌ಪಿ ಅಭ್ಯರ್ಥಿಗಳ ಆಸ್ತಿ ಮೌಲ್ಯ 7.71 ಕೋಟಿ ರೂಪಾಯಿ, 58 ಕಾಂಗ್ರೆಸ್ ಅಭ್ಯರ್ಥಿಗಳ ಆಸ್ತಿ ಮೌಲ್ಯ 3.08 ಕೋಟಿ ರೂಪಾಯಿ ಮತ್ತು 52 ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಆಸ್ತಿ ಮೌಲ್ಯ 1.23 ಕೋಟಿ ರೂಪಾಯಿ ಆಗಿದೆ.
ಮೊದಲ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ:
ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಸ್ವಾತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 600 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶ್ರೀಮಂತ ಅಭ್ಯರ್ಥಿಗಳ ಕುರಿತು ಮಾಹಿತಿ:
ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಆಸ್ತಿಯನ್ನು ಘೋಷಿಸಿಕೊಂಡ ಅಗ್ರ ಮೂವರು ಅಭ್ಯರ್ಥಿಗಳಲ್ಲಿ ಭಾರತೀಯ ಜನತಾ ಪಕ್ಷದವರೇ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಮಥುರಾ ಕಂಟೇನ್ಮೆಂಟ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮಿತ್ ಅಗರ್ವಾಲ್ 148 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಮಥುರಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಸ್‌ಕೆ ಶರ್ಮಾ 112 ಕೋಟಿ ಆಸ್ತಿ ಘೋಷಿಸಿಕೊಂಡಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಸಿಕಂದರಾಬಾದ್ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ರಾಹುಲ್ ಯಾದವ್ 100 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಘೋಷಿಸಿಕೊಳ್ಳುವ ಮೂಲಕ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ನಡುವೆ ಇಬ್ಬರು ಅಭ್ಯರ್ಥಿಗಳು ಶೂನ್ಯ ಆಸ್ತಿಯನ್ನು ಘೋಷಿಸಿರುವುದು ಗಮನಾರ್ಹವಾಗಿದೆ. ಈ ಪೈಕಿ ಒಬ್ಬರಾದ ಬಹುಜನ ಮುಕ್ತಿ ಪಕ್ಷದ ಕೈಲಾಶ್ ಕುಮಾರ್ ಅಲಿಘರ್‌ನ ಅತ್ರೌಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಮುಜಾಫರ್‌ನಗರದ ಮೀರಾಪುರ ಕ್ಷೇತ್ರದಿಂದ ಸ್ಪರ್ಧಿಸಲಿರುವ ರಾಷ್ಟ್ರ ನಿರ್ಮಾಣ ಪಕ್ಷದ ಕೆಎಂ ಪ್ರೀತಿ ಕೂಡಾ ಶೂನ್ಯ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಏಳು ಹಂತಗಳಲ್ಲಿ ನಡೆಯಲಿರುವ ಯುಪಿ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.












Click it and Unblock the Notifications