ಪೊಲೀಸರ ಹತ್ಯೆ; ವಿಕಾಸ್ ದುಬೆ ಬಂಧಿಸಲು 25 ತಂಡ ರಚನೆ
ಲಕ್ನೋ, ಜುಲೈ 06 : ಉತ್ತರ ಪ್ರದೇಶ ಪೊಲೀಸರು ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಬಂಧಿಸಲು 25 ತಂಡಗಳನ್ನು ರಚನೆ ಮಾಡಿದ್ದಾರೆ. ದುಬೆ ಪರಾರಿಯಾಗಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿಯೂ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಕಾನ್ಪುರದ ಐಜಿ ಮೋಹಿತ್ ಅಗರ್‌ವಾಲ್ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. "ವಿಜಯ್ ದುಬೆ ಜೊತೆಗಿನ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ" ಎಂದು ಹೇಳಿದ್ದಾರೆ.
"40 ಪೊಲೀಸ್ ಠಾಣೆಗಳ ಸಿಬ್ಬಂದಿಗಳನ್ನು ಒಳಗೊಂಡ 25 ತಂಡಗಳನ್ನು ವಿಜಯ್ ದುಬೆ ಬಂಧನಕ್ಕಾಗಿ ರಚನೆ ಮಾಡಲಾಗಿದೆ. ಶೀಘ್ರದಲ್ಲಿಯೇ ನಾವು ವಿಜಯ್ ದುಬೆ ಸೇರಿದಂತೆ ಆತನ ತಂಡದ ಎಲ್ಲರನ್ನೂ ಬಂಧಿಸಲಿದ್ದೇವೆ" ಎಂದು ಐಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಪೊಲೀಸ್ ಇಲಾಖೆ ವಿಜಯ್ ದುಬೆ ಬಗ್ಗೆ ಸುಳಿವು ಕೊಟ್ಟವರಿಗೆ 2.5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. 8 ಪೊಲೀಸ್ ಸಿಬ್ಬಂದಿಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ವಿಕಾಸ್ ದುಬೆ ಪ್ರಮುಖ ಆರೋಪಿಯಾಗಿದ್ದು, ಗುರುವಾರದಿಂದ ತಲೆಮರೆಸಿಕೊಂಡಿದ್ದಾನೆ.
ವಿಜಯ್ ದುಬೆ ಪರಾರಿಯಾಗಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿಯೂ ಪೊಲೀಸರು ಎಚ್ಚರ ವಹಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದೊಂದಿಗೆ ಗಡಿಗಳನ್ನು ಹಂಚಿಕೊಳ್ಳುವ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಗುರುವಾರ ರಾತ್ರಿ ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ನೇತೃತ್ವದ ತಂಡ ತನ್ನನ್ನು ಬಂಧಿಸಲು ಆಗಮಿಸುತ್ತಿದೆ ಎಂಬ ಮಾಹಿತಿ ಪೊಲೀಸ್ ಇಲಾಖೆಯಿಂದಲೇ ವಿಜಯ್ ದುಬೆಗೆ ತಲುಪಿತ್ತು. ತನ್ನ ಸಹಚರರನ್ನು ಕರೆಸಿಕೊಂಡಿದ್ದ ಆತ ಕಟ್ಟಡದ ಮೇಲಿನಿಂದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ.
ಈ ದಾಳಿಯಲ್ಲಿ ಡಿವೈಎಸ್‌ಪಿ ಸೇರಿದಂತೆ 8 ಪೊಲೀಸರು ಮೃತಪಟ್ಟಿದ್ದರು. ಈ ಘಟನೆ ಬಳಿಕ ವಿಜಯ್ ದುಬೆ ಪರಾಗಿಯಾಗಿದ್ದು, ಪೊಲೀಸರು ಹುಡುಕಾಟವನ್ನು ಮುಂದುವರೆಸಿದ್ದಾರೆ.












Click it and Unblock the Notifications