ಮೊದಲ ರಾತ್ರಿ ಅಪಹರಣ ಕೇಸ್‌ಗೆ ಟ್ವಿಸ್ಟ್: ನಾನೇ ಹೋಗಿದ್ದು ಎಂದ ಮಹಿಳೆ
ಕೊಪ್ಪಳ, ಅಕ್ಟೋಬರ್, 11: ಕೊಪ್ಪಳದಲ್ಲಿ ಮೊದಲ ರಾತ್ರಿಯಂದೇ ವಧು ಅಪಹರಣವಾಗಿರುವ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ನಾನು ಸ್ವಇಚ್ಛೆಯಿಂದಲೇ ಹೋಗಿದ್ದೇನೆ, ಯಾರೂ ನನ್ನನ್ನು ಅಪಹರಿಸಿಲ್ಲ ಎಂದು ನವ ವಿವಾಹಿತೆ ಗಾಯಿತ್ರಿ ಸ್ಪಷ್ಟನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವ ಜೋಡಿಯ ಮೊದಲರಾತ್ರಿಯಂದೇ ವಧು ಅಪಹರಣವಾಗಿದೆ ಎಂದು ಆಕೆಯ ಪತಿ ದೂರು ನೀಡಿದ್ದರು.
ಈ ಕುರಿತು ಸತ್ಯ ಬಾಯಿ ಬಿಟ್ಟಿರುವ ವಧು ಗಾಯತ್ರಿ, ನನಗೆ ಇದು ಇಷ್ಟವಿಲ್ಲದ ಮದುವೆಯಾಗಿದ್ದು, ನಾನು ಅಂಜುಕುಮಾರ್ ಅವರನ್ನು ಇಷ್ಟಪಟ್ಟಿದ್ದೆ, ಮದುವೆಯನ್ನೂ ಕೂಡ ಆಗಿದ್ದೆ, ಆದರೆ ತಾಳಿಯನ್ನು ಕಿತ್ತು ಹಾಕಿ ಸೋದರಮಾವನ ಜತೆಗೆ ಬಲವಂತದ ಮದುವೆ ಮಾಡಿದ್ದರು ಎಂದಿದ್ದಾರೆ.
ಮದುವೆಯಾದ ಬಳಿಕ ಹದಿನೈದು ದಿನಗಳ ನಂತರ ಫರ್ಸ್ಟ್ ನೈಟ್ ಅರೇಂಜ್ ಮಾಡಿದ್ದರು. ಹಾಗಾಗಿ ಅಂಜುಕುಮಾರ್ ಗೆ(ಮೊದಲ ಪತಿ) ಕಾಲ್ ಮಾಡಿ ನಾನೇ ಕರೆದುಕೊಂಡು ಹೋಗುವಂತೆ ಕೇಳಿಕೊಂಡೆ. ಇದು ಅಪಹರಣವಲ್ಲ, ಸ್ವಇಚ್ಛೆಯಿಂದಲೇ ಹೋಗಿದ್ದೇನೆ. ನನಗೆ ಅಂಜುಕುಮಾರ್ ಜೊತೆಗೆ ಬದುಕಲು ಬಿಡಿ ಎಂದು ವಧು ಗಾಯಿತ್ರಿ ಬೇಡಿಕೊಂಡಿದ್ದಾಳೆ.

ಸೆಪ್ಟೆಂಬರ್ 24ರಂದು ಗುಡೂರು ಗ್ರಾಮದ ಗಾಯಿತ್ರಿ ಹಾಗೂ ಮಲ್ಲನಗೌಡ ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ವಧು ಶೌಚಾಲಯಕ್ಕೆ ಹೋದಾಗ ಅಪಹರಿಸಲಾಗಿದೆ ಎಂದು ಹೇಳಿರುವುದು ಸುಳ್ಳು ಎಂದು ಗಾಯಿತ್ರಿ ಸ್ಪಷ್ಟಪಡಿಸಿದ್ದಾಳೆ.












Click it and Unblock the Notifications