ನೀವು ಹೇಳಿದಂತೆ - ನಾನು ನುಡಿದಂತೆಯೇ ನಡೆದುಕೊಳ್ಳುವೆ: ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ನಿಷ್ಠೆ!
Karnataka CM Change: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಹುದಿನಗಳಿಂದ ಚರ್ಚೆಯ ಹಂತದಲ್ಲೇ ಉಳಿದಿದ್ದ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆ ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ಈ ನಡುವೆ ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ನಿಷ್ಠೆ ತೋರಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಯಾದಾಗಿನಿಂದಲೂ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವ ಎಂದು ಹೇಳಿದ್ದರು. ನೀವು ಮುಂದಿನ ಬಜೆಟ್ ಮಂಡನೆ ಮಾಡುವಿರಾ ಎನ್ನುವ ಪ್ರಶ್ನೆಗೆ ಹೈಕಮಾಂಡ್ ಹೇಳುವ ವರೆಗೂ ಬಜೆಟ್ ಮಂಡನೆ ಮಾಡಲಿದ್ದೇನೆ ಎಂದು ಸಿದ್ದರಾಮಯ್ಯ ಅವರು ಈಚೆಗೆ ಹೇಳಿದ್ದರು.
ಸಿದ್ದರಾಮಯ್ಯ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ಸಭೆ ನಡೆಸಿದರು. ಈ ಸಭೆಯ ನಂತರ ರಾಹುಲ್ ಗಾಂಧಿ ಅವರು ಪ್ರತ್ಯೇಕ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಅಧಿಕಾರ ಬಿಟ್ಟುಕೊಡುವ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯ ಅವರಿಗೆ ನೀವೇ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು, ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ; ನೀವು ಸೂಚಿಸಿದಂತೆ ನಡೆದುಕೊಳ್ಳುವೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ನಿಷ್ಠೆ !
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಗುವುದಕ್ಕಿಂತಲೂ ಮೊದಲು ಹಾಗೂ ಮುಖ್ಯಮಂತ್ರಿ ನಂತರವೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತು ಕೇಳುವುದಾಗಿ ಹೇಳುತ್ತಲೇ ಬಂದಿದ್ದರು. ಈಗ ಆ ಹೇಳಿಕೆಗಳು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ನಾಯಕತ್ವ ಬದಲಾವಣೆ ಸೇರಿದಂತೆ ಮಹತ್ವದ ವಿಚಾರಗಳಲ್ಲಿ ರಾಹುಲ್ ಗಾಂಧಿ ಅವರು ಹೇಳುವ ಮಾತು ಅಂತಿಮ ಎಂಬರ್ಥದಲ್ಲಿಯೇ ಸಿದ್ದರಾಮಯ್ಯ ಅವರು ಹೇಳಿಕೊಂಡೇ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲಿಗ ಸಚಿವರು, ಆಪ್ತರ ಸಭೆ, ಉಪಾಹಾರ- ಭೋಜನ ಕೂಟಗಳಲ್ಲೂ ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿರುವ ರಾಹುಲ್ ಗಾಂಧಿಯವರ ಮಾತುಗಳನ್ನು ತೆಗೆದು ಹಾಕುವ ಪ್ರಮೇಯವೇ ಇಲ್ಲ ಎಂದೇ ಸಿದ್ದರಾಮಯ್ಯನವರು ಹೇಳಿದ್ದರು ಎನ್ನುವುದು ವಿಶೇಷ.
ಸಿದ್ದರಾಮಯ್ಯ ರಾಜೀನಾಮೆಗೆ ರಾಹುಲ್ ಗಾಂಧಿ ಸೂಚನೆ
ಇನ್ನು ಮಂಗಳವಾರ ಹೈಕಮಾಂಡ್ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಗಳವಾರ ಪಕ್ಷದ ವರಿಷ್ಠೆ ಮತ್ತು ತಮ್ಮ ತಾಯಿ ಸೋನಿಯಾಗಾಂಧಿ ಅವರ ಮನೆಗೆ ತೆರಳಿದ ರಾಹುಲ್ ಗಾಂಧಿ ಅವರ ಜತೆ ಸಮಾಲೋಚನೆ ನಡೆಸಿದ್ದರು. ಮಧ್ಯಾಹ್ನದ ಊಟದ ನಂತರ ಮತ್ತೆ ಇಂದಿರಾ ಭವನದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಅವರು ರಾಜೀನಾಮೆ ಕೊಡುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.













Click it and Unblock the Notifications