ಕೊಪ್ಪಳ: ಸಿಎಂ ವಿರುದ್ಧ ಬಿಜೆಪಿಯ ಪ್ರತಿಭಟನೆಗೆ ಪೊಲೀಸರ ಅಡ್ಡಗಾಲು
ಕೊಪ್ಪಳ, ಮಾರ್ಚ್ 19: ಇಂದು ಸಂಜೆ ನಗರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ಮನೆ ಬಳಿ ಕಾವಲು ಏರ್ಪಡಿಸಿ. ಬಿಜೆಪಿ ಕಾರ್ಯಕರ್ತರು ಮನೆ ಬಳಿ ಬರದಂತೆ ತಡೆದಿದ್ದಾರೆ.
ತುಂಗಭದ್ರ ಎಡದಂಡೆ ನಾಲೆಯಿಂದ ಜಿಲ್ಲೆಯ ಎರಡನೇ ಬೆಳೆಗೆ ನೀರು ಹರಿಸಲು ಒತ್ತಾಯಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ವಿಷಯ ತಿಳಿದ ಪೊಲೀಸರು ಮುಮಚಿತವಾಗಿಯೇ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರುಗಳನ್ನು ಬಂಧಿಸಿ ಪ್ರತಿಭಟನೆ ಮಾಡದಂತೆ ತಡೆಯುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂದು ಸಂಜೆ ನಗರದಲ್ಲಿನ ಬಸವೇಶ್ವರರ ಕಂಚಿನ ಪುತ್ಥಳಿ ಉದ್ಘಾಟನೆ ಮತ್ತು ಯಲಬುರ್ಗಾದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಸೋಮವಾರ ಸಂಜೆ ಆಗಮಿಸಲಿದ್ದಾರೆ. ಅವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿ ಬಿಜೆಪಿ ಸಂಸದ ಸಂಗಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲು ಸರ್ವ ತಯಾರಿ ಮಾಡಲಾಗಿತ್ತು. ಸಂಸದ ಸಂಗಣ್ಣ ಅವರ ಮನೆ ಬಳಿ ಪೊಲೀಸರು ಕಾವಲು ಕಾಯುತ್ತಿದ್ದು, ಅವರ ಮನೆ ಬಳಿಗೆ ಯಾವುದೇ ಕಾರ್ಯಕರ್ತರು ಬರದಂತೆ ತಡೆಯಲಾಗಿದೆ.

ಪೊಲೀಸರ ಈ ನಡೆಯನ್ನು ವಿರೋಧಿಸಿರುವ ಸಂಸದ ಸಂಗಣ್ಣ ಕರಡಿ ಅವರು 'ಇದು ಸಂವಿಧಾನಕ್ಕೆ ವಿರೋಧ, ಪೊಲೀಸರು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಯತ್ನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸಬೇಕು. ನೀರು ಬಿಡಲು ಈ ಹಿಂದೆಯೂ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಅದಕ್ಕೆ ಸ್ಪಂದಿಸಿಲ್ಲ. ತುಂಗಭದ್ರಾ ಅಣೆಕಟ್ಟೆ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಭ್ರಷ್ಟರಿದ್ದಾರೆ ಅದರ ಬಗ್ಗೆಯೂ ದೂರು ನೀಡಿದ್ದೆವು, ಈಗ ಮುಖ್ಯಮಂತ್ರಿಯವರ ಗಮನ ಸೆಳೆಯಲು ಸಿದ್ಧತೆ ನಡೆಸಿದ್ದೆವು ಆದರೆ ಪೊಲೀಸರು ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.












Click it and Unblock the Notifications