'ಹಿಂದುತ್ವ.. ಹಿಂದುತ್ವ ಎಂದು ಪುಂಗೋರಿಗೇನು ಗೊತ್ತು ಬದನೆಕಾಯಿ'
ಕೊಪ್ಪಳ, ಜುಲೈ 7: ರಾಜ್ಯದಲ್ಲಿ ಇದೀಗ ಸಿಎಂ ಬದಲಾವಣೆ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ನಡುವೆಯೇ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹಿಂದುತ್ವ.. ಹಿಂದುತ್ವ ಎಂದು ಮಾತನಾಡುತ್ತಾರಲ್ಲ, ಅವರಿಗೆ ಏನು ಗೊತ್ತು ಬದನೆಕಾಯಿ. ಹಿಂದುತ್ವ ಎನ್ನುವವರು ಬಾಯಿ ಮುಚ್ಚಿಕೊಂಡು ಇರಲಿ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಹೀಗೆ ಹೇಳಿದ್ದು ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾದಲ್ಲಿ ಕಾರ್ಯಕ್ರಮದಲ್ಲಿ ಇಂದು (ಜುಲೈ 7) ಮಾತನಾಡಿದ ಅವರು, ಹಿಂದೆ ಬಂಗಾರಪ್ಪ ಅವರು ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಆರ್ಥಿಕ ಬಲಕ್ಕಾಗಿ ಆರಾಧನಾ ಯೋಜನೆ ಜಾರಿ ಮಾಡಿದ್ದರು. ಇದೀಗ ಅಜೀಂ ಪ್ರೇಮಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಅವರು ಯಾರೂ ಜಾತಿ ಮಾಡಿಲ್ಲ, ಎಲ್ಲ ಮಕ್ಕಳಿಗೂ ಮೊಟ್ಟೆ, ಬಾಳೆ ಹಣ್ಣು ಕೊಡಲು ಒಪ್ಪಿ ಹಣ ನೀಡಿದ್ದಾರೆ. ಗ್ಯಾರಂಟಿಯಿಂದ ಪುರುಷರಿಗೆ ಯಾವುದೇ ಬೇಸರವಿಲ್ಲ. ಅವರು ಬೇಸರ ಮಾಡಿಕೊಂಡಿಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ಬಡತನ ನಿವಾರಣೆಗೆ ಗ್ಯಾರಂಟಿ ಯೋಜನೆ ನೀಡಿದೆ. ನನ್ನ ಬಗ್ಗೆ ಮಾಡುವ ಟೀಕೆ ಟಿಪ್ಷಣಿಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಹೇರ್ ಸ್ಟೈಲ್ ಇರುವುದೇ ಹೀಗೆ. ಟೀಕೆ ಮಾಡುವವರು ಮಾಡಲಿ. ನನ್ನ ಹೇರ್ ಸ್ಟೈಲ್ ಮಕ್ಕಳು ಮಾಡಿಕೊಳ್ಳುತ್ತಾರೆ ಎಂದೆಲ್ಲಾ ಟೀಕೆ ಮಾಡಿದ್ದರು. ಆದರೆ, ವಿದ್ಯಾರ್ಥಿಗಳು 12ನೇ ತರಗತಿ ನಂತರ ಹೇರ್ ಸ್ಟೈಲ್ ಮಾಡಿಕೊಳ್ಳಲಿ. ಈಗ ನನ್ನಂತೆ ಹೇರ್ ಸ್ಟೈಲ್ ಬೇಡ ಎಂದು ಹೇಳಿದರು.
ಅಲ್ಲದೆ, ನಾನು ಬಿಜೆಪಿಯವರ ಟೀಕೆಗೆ ಕ್ಯಾರೆ ಎನ್ನುವುದಿಲ್ಲ. ನಮ್ಮ ಸರ್ಕಾರ 11 ತಿಂಗಳಲ್ಲಿ 12,500 ಶಿಕ್ಷಕರ ನೇಮಕಾತಿ ಮಾಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸ್ವಾಭಿಮಾನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿ ಗಮನ ಸೆಳೆದಿದ್ದಾರೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಹೇಳಿದರು.
ಮೇಲ್ವರ್ಗದ ಬಡವ ಬಂದರೆ ಏನು ಸ್ವಾಮಿ ಎನ್ನುತ್ತಾರೆ. ದಲಿತನೊಬ್ಬ ವಿದ್ಯಾವಂತ ಶ್ರೀಮಂತ ಬಂದರೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ, ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿಯಲ್ಲ. ನನ್ನನ್ನ ದುರಹಂಕಾರಿ ಅಂದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ ಸ್ವಾಮಿ. ನಿಮ್ಮನ್ನು ದುರಹಂಕಾರಿ ಅಂದರೂ ಸ್ವಾಭಿಮಾನಿಗಳಾಗಿ ಬದುಕಿ ಎಂದು ಅಲ್ಲಿ ನೆರೆದಿದ್ದವರಿಗೆ ಕಿವಿಮಾತು ಹೇಳಿದರು.












Click it and Unblock the Notifications