ಕೊಪ್ಪಳ-ಬೆಂಗಳೂರು ನಾನ್ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ
ಕೊಪ್ಪಳ, ಏಪ್ರಿಲ್ 15: ಕೊಪ್ಪಳ ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಸಿಹಿಸುದ್ದಿಯನ್ನು ನೀಡಿದೆ. ಕೊಪ್ಪಳ-ಬೆಂಗಳೂರು ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ನಾನ್ ಎಸಿ ಸ್ಲೀಪರ್ ಬಸ್ ಸಂಚಾರದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಕೊಪ್ಪಳ-ಬೆಂಗಳೂರು ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು.

ಸಚಿವರು ಮಾತನಾಡಿ, "ಕೊಪ್ಪಳ-ಬೆಂಗಳೂರು ಮತ್ತು ಕೊಪ್ಪಳ-ಬೀದರ್ ನಡುವೆ ಬಸ್ ಸಂಚಾರದಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು" ಎಂದು ಹೇಳಿದರು.
ಕೆಕೆಆರ್‌ಟಿಸಿಯ ಕೊಪ್ಪಳ ವಿಭಾಗ ನೂತನ 4 ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಕೊಪ್ಪಳ-ಬೆಂಗಳೂರು ಮತ್ತು ಕೊಪ್ಪಳ-ಬೀದರ್ ಮಾರ್ಗದಲ್ಲಿ ಆರಂಭಿಸಿದೆ. ಸೋಮವಾರ ಕೊಪ್ಪಳ ಬಸ್ ನಿಲ್ದಾಣದಲ್ಲಿ ಹೊಸ ಬಸ್ಸುಗಳ ಸಂಚಾರಕ್ಕೆ ಸಚಿವರು ಚಾಲನೆ ನೀಡಿದ್ದಾರೆ.
ಬಸ್ ವೇಳಾಪಟ್ಟಿ: ಕೊಪ್ಪಳ-ಬೆಂಗಳೂರು ಮತ್ತು ಕೊಪ್ಪಳ-ಬೀದರ್ ನಡುವೆ ಬಸ್ಸುಗಳ ಅವಶ್ಯಕತೆ ಇತ್ತು. ಹಾಗಾಗಿ ಹೊಸ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಕೊಪ್ಪಳ ವಿಭಾಗಕ್ಕೆ 4 ಅಮೋಘವರ್ಷ ನಾನ್ ಎಸಿ ಸ್ಲೀಪರ್ ಬಸ್ ಸಿಕ್ಕಿದ್ದು, ಅವುಗಳಲ್ಲಿ ಎರಡು ಕೊಪ್ಪಳ- ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಈ ಬಸ್ಸುಗಳು ರಾತ್ರಿ 10 ಗಂಟೆಗೆ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದೆ.
ಕೊಪ್ಪಳ- ಬೀದರ್ ನಡುವೆ 2 ಬಸ್ಸುಗಳು ಸಂಚಾರ ಮಾಡಲಿದ್ದು, ಕೊಪ್ಪಳದಿಂದ ರಾತ್ರಿ 8.25 ಬಸ್ ಹೊರಡಲಿದೆ. ಈ ಬಸ್‌ಗಳು ವಾರದ ಎಲ್ಲಾ ದಿನಗಳಲ್ಲಿ ಸಂಚರಿಸಲಿದ್ದು, ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಸಚಿವ ಶಿವರಾಜ ಎಸ್. ತಂಗಡಗಿ ಕೊಪ್ಪಳ-ಬೆಂಗಳೂರು ಹಾಗೂ ಕೊಪ್ಪಳ-ಬೀದರ್ ನಾನ್ ಎಸಿ ಸ್ಲೀಪರ್ ಬಸ್ ಸಂಚಾರದಿಂದ ಜನರಿಗೆ ಬಹಳ ಅನುಕೂಲವಾಗಲಿದೆ. ಜನರ ಬೇಡಿಕೆಯಂತೆ ಬಸ್ ಸೇವೆ ಆರಂಭಿಸಲಾಗಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನೂತನ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದ ನಂತರ ಸಚಿವರು ಬಸ್ ಒಳಗಡೆ ಹೋಗಿ ಬಸ್ಸಿನ ಆಸನಗಳ ವ್ಯವಸ್ಥೆ ಹಾಗೂ ಅದರಲ್ಲಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಬಸ್‌ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜನರಿಗೆ ಸೇವೆ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಕೆಆರ್‌ಟಿಸಿ ಕುರಿತು: ಮೈಸೂರು ಸರ್ಕಾರದ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಸಾರಿಗೆಯನ್ನು 1961ರ ಆಗಸ್ಟ್ 1ರಂದು ರಸ್ತೆ ಸಾರಿಗೆ ನಿಗಮ ಕಾಯ್ದೆ-1950ರ ಸೆಕ್ಷನ್ 3ರ ಪ್ರಕಾರ ಸ್ವತಂತ್ರ ನಿಗಮವನ್ನಾಗಿ ಪರಿವರ್ತಿಸಲಾಯಿತು ಹಾಗೂ ಕೆಎಸ್‌ಆರ್‌ಟಿಸಿ ಎಂದು ನಾಮಕರಣ ಮಾಡಲಾಯಿತು. ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸಲು ಮತ್ತು ಗುಣಮಟ್ಟದ ಸಾರಿಗೆ ಸೇವೆಯನ್ನು ಒದಗಿಸಲು ಹಾಗೂ ನಿಗಮದ ಕಾರ್ಯಾಚರಣೆಗಳ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆಯನ್ನು ಹೊಂದಲು, ರಾಜ್ಯ ಸರ್ಕಾರವು ಕ.ರಾ.ರ.ಸಾ ಸಂಸ್ಥೆ ಅನ್ನು ವಿಂಗಡಿಸಿ ಎರಡು ಹೊಸ ನಿಗಮಗಳನ್ನು ಅಂದರೆ, 15-08-1997 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಯಿತು.
ನಂತರ ಕರ್ನಾಟಕ ರಾಜ್ಯದ ಈಶಾನ್ಯ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕ, ಪರಿಣಾಮಕಾರಿ, ವಿಶ್ವಾಸಾರ್ಹ ಮತ್ತು ಆರ್ಥಿಕವಾಗಿ ಅನುಕೂಲವಾಗುವ ಸಾರಿಗೆ ಸೌಲಭ್ಯವನ್ನು ಒದಗಿಸಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 15/08/2000ರಂದು ಕಲಬುರಗಿಯಲ್ಲಿ ಸ್ಥಾಪಿಸಿ ದಿನಾಂಕ 01/10/2000ರಂದು ಆರ್ಥಿಕವಾಗಿ ಸ್ವತಂತ್ರಗೊಳಿಸಲಾಯಿತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ದಿನಾಂಕ 06/07/2021ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ಮರು ನಾಮಕರಣ ಮಾಡಲಾಯಿತು.
ಇದು ಕಲಬುರಗಿಯಲ್ಲಿ ಕೇಂದ್ರ ಕಛೇರಿಯೊಂದಿಗೆ 9 ವಿಭಾಗಗಳು, 52 ಡಿಪೋಗಳು, 154 ಬಸ್ ನಿಲ್ದಾಣಗಳು, 922 ವೇಸೈಡ್ ಶೆಲ್ಟರ್‌ಗಳು ಮತ್ತು 155 ನಗರ-ಸಾರಿಗೆ ಶೆಲ್ಟರ್‌ಗಳು, ಯಾದಗಿರನಲ್ಲಿ ಪ್ರಾದೇಶಿಕ ಕಾರ್ಯಾಗಾರ, ಹುಮನಾಬಾದ್‌ನಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ, ಹಗರಿಬೊಮ್ಮನಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರ, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದೆ.












Click it and Unblock the Notifications