ಸಿದ್ದರಾಮಯ್ಯನವರೇ ನೀವು ಯಾವ ಗಿರಾಕಿ? ಕೊಪ್ಪಳದಲ್ಲಿ ಬಸವರಾಜ ಬೊಮ್ಮಾಯಿ ಪ್ರಶ್ನೆ
ಕೊಪ್ಪಳ, ಅಕ್ಟೋಬರ್, 12; ಸಿದ್ದರಾಮಯ್ಯ ನನ್ನನ್ನು ಬೊಮ್ಮಾಯಿ ನಮ್ಮ ಗಿರಾಕಿ ಎಂದು ಹೇಳಿದ್ದರು. ಹಾಗಾದರೆ ಸಿದ್ದರಾಮಯ್ಯ ನೀವು ಯಾವ ಗಿರಾಕಿ, ಈಗ ನೀವು ಎಲ್ಲಿದ್ದೀರಿ? ನೀವು ಕೂಡ ಜನತಾ ಪಕ್ಷದಲ್ಲಿ ಇದ್ದ ಗಿರಾಕಿಯೇ. ನೀವು ಈ ಹಿಂದೆ ಸೋನಿಯಾ ಗಾಂಧಿ ಬಗ್ಗೆ ಏನೆಲ್ಲ ಮಾತಾಡಿದ್ದೀರಿ ಗೊತ್ತಿದೆಯಾ? ಹಳೇ ಟೇಪ್ ತೆರೆದು ನೋಡಿದರೆ ಎಲ್ಲ ಗೊತ್ತಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಕೊಪ್ಪಳದಲ್ಲಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ ಮಾಡಿ, ಬೊಮ್ಮಾಯಿ ಜನರ ಹತ್ತಿರ ಒಬ್ಬರೇ ಹೋಗುವುದಕ್ಕೆ ಧಮ್ ಇಲ್ಲ. ಅದಕ್ಕೆ ಬಿಎಸ್‌ವೈ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದಿದ್ದರು. "ನಾನು ಅವತ್ತೇ ಯಾತ್ರೆ ಮಾಡುತ್ತೇವೆ ಎಂದಿದ್ದೆ. ಧಮ್ ಇದ್ದರೆ ಇದನ್ನು ತಡೆಯಿರಿ. ನಾವೆಲ್ಲಾ ಒಂದಾಗಿ ಹೋದರೆ ಟೀಕೆ ಮಾಡುತ್ತಾರೆ. ನೀವು ಡಿ.ಕೆ.ಶಿವಕುಮಾರ್ ಮೊದಲು ಒಂದಾಗಿ ಹೋಗಿ, ಆಮೇಲೆ ಜನ ಏನು ಮಾಡುತ್ತಾರೆ ಎಂದು ಗೊತ್ತಾಗುತ್ತದೆ. ಪಾಪ ಸಿದ್ದರಾಮಣ್ಣಗೆ ರಾಹುಲ್ ಗಾಂಧಿ ಮೊನ್ನೆ ಶಾಕ್ ಕೊಟ್ಟಿದ್ದಾರೆ. ಚುನಾವಣೆ ಆದ ಮೇಲೆ ಸಿಎಂ ಆಯ್ಕೆ ಎಂದಿದ್ದಾರೆ. ರಾಹುಲ್ ಗಾಂಧಿ ಮೇಲೆ ಆಸೆ ಇಟ್ಟುಕೊಂಡಿದ್ದ ಸಿದ್ದರಾಮಣ್ಣಗೆ ಇದೀಗ ನಿರಾಸೆ ಆಗಿದೆ. ರಾಹುಲ್ ಗಾಂಧಿ ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ," ಎಂದು ಕೊಪ್ಪಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿಗೆ ಖನ್ನಾ!
"ಸಿದ್ದರಾಮಯ್ಯನವರು ಅಹಿಂದಕ್ಕೆ ಏನೂ ಮಾಡಿಲ್ಲ. ನಾನು ಕನಕದಾಸರ ನಾಡಿನಿಂದ ಬಂದವನಾಗಿದ್ದೇನೆ. ಕನಕದಾಸರ ವಿಚಾರ ಇಡೀ ರಾಜ್ಯಕ್ಕೆ ಬಿಂಬಿಸುತ್ತಿದ್ದೇವೆ. ನಿಜವಾದ ಸಾಮಾಜಿಕ ನ್ಯಾಯ ಬಿಜೆಪಿಗರು ಕೊಡುತ್ತಿದ್ದಾರೆ. ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‌ಗೆ ಭಾಷಣದ ಸರಕಾಗಿಬಿಟ್ಟಿದೆ.
ಸುಮಾರು 20 ಸಾವಿರ ಕೋಟಿ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ." ಈ ಬಗ್ಗೆ ಈಗಾಗಲೇ ಲೋಕಾಯುಕ್ತದಿಂದ ವರದಿ ಬಂದಿದೆ. ನೀವು ಅಲ್ಪ ಸಂಖ್ಯಾತರಿಗೂ ಮೋಸ ಮಾಡಿದ್ದೀರಿ, ಕಾಂಗ್ರೆಸ್ ಅಂದರೆ ಬ್ರಿಟೀಷರ ವಂಶಾವಳಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಂದ ಮಾತು ತಿರುಗಿಸುವ ಕೆಲಸ
ಕಾಂಗ್ರೆಸ್ ನಾಯಕರಿಗೆ ಚುನಾವಣೆ ಬಂದಾಗ ಜನರು ನೆನಪಾಗುತ್ತಾರೆ. ಈ ಹಿಂದೆ ಕಾಂಗ್ರೆಸ್‌ನವರು ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ನೀರು ಹಿಡಿದು ಪ್ರಮಾಣ ಮಾಡಿ 50 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಇದೆಲ್ಲವನ್ನು ಮರೆತು ಬಿಟ್ಟರು. ಮಾತು ತಿರುಗಿಸಿ ನಂತರ ಎಲ್ಲ ಯೋಜನೆಗೆ ಸೇರಿ 50 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರು ಮತ್ತೇ ಇಲ್ಲಿಗೆ ಬಂದರೆ ಜನರು ಅವರನ್ನು ಪ್ರಶ್ನಿಸಬೇಕು ಎಂದು ಕೊಪ್ಪಳದ ಜನರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ನದ್ದು ಪ್ರಯೋಜನ ಇಲ್ಲದ ಯಾತ್ರೆ
ಕೊಪ್ಪಳದ ಕುಷ್ಟಗಿಯಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರ ಪಾದಯಾತ್ರೆ ಏನೂ ಕೆಲಸ ಮಾಡುವುದಿಲ್ಲ. ನಾವು ಹೈದರಾಬಾರ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತಾ ಮಾಡಿದ್ದೇವೆ. ಈ ಭಾಗಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂದರು.

ಸರ್ಕಾರವನ್ನು ಸಮರ್ಥಿಸಿಕೊಂಡ ಬೊಮ್ಮಾಯಿ
ಮಹಾಮಾರಿ ಕೊರೊನಾ ಬಂದಂತಹ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯ ನಿಂತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಭಾಷಣದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಇತ್ತು. ಬಜೆಟ್ ಪುಸ್ತಕದಲ್ಲಿ ಮಾತ್ರ ಹಣ ಮೀಸಲು ಇಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ದಲಿತರ ಶಿಕ್ಷಣಕ್ಕೆ ಶ್ರಮಿಸಲು ಸದಾ ಬದ್ಧವಾಗಿದೆ ಎಂದರು.












Click it and Unblock the Notifications