ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕನಕ ಭವನ ನಿರ್ಮಾಣಕ್ಕೆ 10 ಲಕ್ಷ ರೂ ಕೊಡುತ್ತೇನೆ-ಎಂಟಿಬಿ ನಾಗರಾಜ್
ಕೊಪ್ಪಳ, ನವೆಂಬರ್ 28: ಸಿದ್ದರಾಮಯ್ಯ ಸಿಎಂ ಆದವರು, ಐದು ವರ್ಷ ಆಡಳಿತ ಮಾಡಿದವರು. ಸಿದ್ದರಾಮಯ್ಯ ಎಲ್ಲಿ ಬೇಕಾದರೂ ನಿಲ್ಲಬಹುದು. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿದ್ದರಾಮಯ್ಯ ತನ್ನ ಕ್ಷೇತ್ರ ಯಾವುದು ಎಂದು ಇನ್ನೂ ಹೇಳಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಕುರುಬ ಸಮಾಜ ಮೀಸಲಾತಿ ಕೊಡಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಸಮುದಾಯಗಳು ಮೀಸಲಾತಿ ಕೇಳುತ್ತಿದ್ದಾರೆ. ಆದರೆ ಕಾನೂನುಗಳಲ್ಲಿ ಅವಕಾಶ ಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಅವರು ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶವಿದೆ. ಯಾವ ಯಾವ ಸಮುದಾಯಗಳಿಗೆ ಎಷ್ಟು ಕೊಡಬೇಕು ಎನ್ನುವುದನ್ನು ನೋಡಿಕೊಂಡು ಕೋರ್ಟ್ ಹಂಚಿಕೆ ಮಾಡಲಿದೆ. ಮೀಸಲಾತಿ ಕೇಳುವುದು ಎಲ್ಲರ ಹಕ್ಕು. ಕಾನೂನು ನಿಯಮದಡಿ ಕಾಲಕಾಲಕ್ಕೆ ಮೀಸಲಾತಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಇನ್ನು ನಾನು ಪಕ್ಷ ಬಿಟ್ಟು ಬಂದಿದಕ್ಕೆ ಕಾರ್ಯಕರ್ತರು ಬೇಜಾರಾಗಿದ್ದರು. ಆದ್ದರಿಂದ ನಾನು ಸೋತೆ. ನಾನು ಒಂದು ಸಲ ಪಕ್ಷ ಬದಲಾಯಿಸಿದ್ದೇನೆ. ಪದೇ ಪದೇ ಪಕ್ಷ ಬದಲಾಯಿಸುವುದಿಲ್ಲ. ನಾನು ಬಿಜೆಪಿ ಪಕ್ಷದಿಂದಲೇ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ತಿಳಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳನ್ನು ಗುರುತಿಸಿ ಹೈಕಮಾಂಡ್ ಟಿಕೆಟ್ ಕೊಡುತ್ತದೆ. ಮುಂದಿನ 2023ರ ಚುನಾವಣೆಯಲ್ಲಿ ನಮ್ಮ ಬಿಜೆಪಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಕೊಪ್ಪಳದ ಗಂಗಾವತಿಯಲ್ಲಿ ನಡೆದ ಕುರುಬ ಸಮಾಜ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ರಾಜ್ಯದ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಕನಕ ಭವನ ನಿರ್ಮಾಣ ಮಾಡಲು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಕೊಡುತ್ತೇನೆ. ಹಾಗೂ ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣಕ್ಕೂ 10 ಲಕ್ಷ ರೂಪಾಯಿ ಕೊಡುತ್ತೇನೆ. ರಾಜ್ಯದ ಯಾವುದೇ ಜಿಲ್ಲೆ ತಾಲೂಕುಗಳಲ್ಲಿ ರಾಯಣ್ಣನ ಪುತ್ತಳಿ ನಿರ್ಮಾಣ ಮಾಡಿದರೆ ಅದಕ್ಕೆ ನಾನು 10 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಬ್ರಿಟಿಷರ ಕಾಲದಲ್ಲಿ ನಮ್ಮ ಸಮುದಾಯ ಎಸ್‌ಸಿಎಸ್‌ಟಿ ದಾಖಲೆಯಲ್ಲಿ ಸೇರ್ಪಡೆಯಾಗಿತ್ತು. ಕಾರಣಾಂತರಗಳಿಂದ ಕೆಲವು ವರ್ಷಗಳು ಆದ ಮೇಲೆ ಆ ದಾಖಲೆಗಳು ಕೈ ತಪ್ಪಿವೆ. ಆದ್ದರಿಂದ ಹೋರಾಟದಲ್ಲಿ ಕೆಲವು ತಾಲೂಕುಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಮಾತ್ರ ಎಸ್‌ಟಿಗೆ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡಿಸುವ ವಿಚಾರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಮಾತು ಮುಂದುವರಿಸಿದ ಅವರು, ಗಂಗಾವತಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಹಾಗೂ ಬೀರಲಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂಪಾಯಿ ನೀಡುತ್ತೇನೆ. ವೀರ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸ ಮೂರ್ತಿ ಅನಾವರಣಕ್ಕೆ ಕೂಡ 10 ಲಕ್ಷ ರೂಪಾಯಿ ನೀಡುತ್ತೇನೆ ಎಂದಿದ್ದಾರೆ.












Click it and Unblock the Notifications