ಕೊಪ್ಪಳ ಹುಲಿಗೆಮ್ಮ ದೇವಾಲಯದ ಭಕ್ತರಿಗೆ ಸಿಹಿಸುದ್ದಿ
ಕೊಪ್ಪಳ, ಡಿಸೆಂಬರ್ 19; ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಕೊಪ್ಪಳ ಜಿಲ್ಲೆಯ ಶ್ರೀ ಹುಲಿಗೆಮ್ಮ ದೇವಸ್ಥಾನ ಸಹ ಒಂದು. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಕ್ಕೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಆದರೆ ಈ ಹಣ ಸದ್ಬಳಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಸಚಿವರ ಮುಂದೆ ಆರೋಪ ಮಾಡಿದರು.
ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನ ಹಾಗೂ ಅಂಜನಾದ್ರಿ ಬೆಟ್ಟಕ್ಕೆ ಮಂಗಳವಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ, ಹುಲಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೀಲಮ್ಮ ಗುಂಗಾಡಿ ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಸಭೆ ನಡೆಸಿದ ಸಚಿವರು, "ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ನಿಶ್ಚಿತ ಠೇವಣಿ ಒಟ್ಟು 55.83 ಕೋಟಿ ರೂ. ಇದ್ದು, ದೇವಸ್ಥಾನ ಅಭಿವೃದ್ಧಿ ಮಾಡುವುದಕ್ಕೆ ಹಣಕಾಸಿನ ಕೊರತೆಯೇ ಇಲ್ಲ. ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರತಿಯನ್ನು ಇಲಾಖೆಗೆ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಂದ 15 ದಿನಗಳೊಳಗಡೆ ಅನುಮೋದನೆ ಪಡೆದು ಕಳುಹಿಸಲಾಗುವುದು" ಎಂದು ಭರವಸೆ ನೀಡಿದರು.
80 ಲಕ್ಷ ಭಕ್ತರ ಭೇಟಿ; ಸಭೆಯಲ್ಲಿ ಮಾತನಾಡಿದ ಸಚಿವರು, "ಕಳೆದ ವರ್ಷ 2022-23ನೇ ಸಾಲಿನಲ್ಲಿ ದೇವಸ್ಥಾನಕ್ಕೆ 80 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಅಂದಾಜು 90 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಎನ್ನುವ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ದೇವಸ್ಥಾನದಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಅತ್ಯಗತ್ಯ ಎಂದು ಭಾವಿಸಬೇಕು. ಈ ಹಿಂದೆ ಮಾಡಿದಂತೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅಭಿವೃದ್ಧಿ ಮಾಡಲು ದೇವಸ್ಥಾನದಲ್ಲಿಯೇ ಸಾಕಷ್ಟು ಅನುದಾನವಿದೆ" ಎಂದು ಅಧಿಕಾರಿಗಳಿಗೆ ತಿಳಿಸಿದರು.
"ಪುರುಷರು ಬಟ್ಟೆ ಬದಲಾಯಿಸುವ ಸ್ಥಳ, ಮಹಿಳೆಯರ ಸ್ನಾನಗೃಹ ಮತ್ತು ಶೌಚಾಲಯ, ಮಹಿಳೆಯರು ಬಟ್ಟೆ ಬದಲಾಯಿಸುವ ಸ್ಥಳ, ತ್ಯಾಜ್ಯ ವಿಂಗಡನಾ ಸ್ಥಳ, ಕ್ಯಾಂಟೀನ್ ನಿರ್ಮಾಣ, ಎಸ್‌ಟಿಪಿ ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡು ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ" ಎಂದು ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹೆಚ್. ಮಾತನಾಡಿ, "ಸವದತ್ತಿಯ ಪ್ರಸಿದ್ಧ ಶ್ರೀ ರೇಣುಕಾ ದೇವಿ ದೇವಸ್ಥಾನದ ಮಾದರಿಯಲ್ಲಿ ಹುಲಿಗಿ ದೇವಸ್ಥಾನವನ್ನು ಸಹ ಅಭಿವೃದ್ಧಿಪಡಿಸುವ ಹಾಗೂ ಈಗಿರುವ ಹಳೆಯ ದೇವಸ್ಥಾನ ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ" ಎಂದು ತಿಳಿಸಿದರು.
"ಹುಲಿಗಿ ದೇವಸ್ಥಾನದ ಹೊಸ ಕಟ್ಟಡವು ಹೇಗಿರಬೇಕು? ಎಂಬುದರ ಬಗ್ಗೆ ಈ ಹಿಂದೆ ನಕಾಶೆಯನ್ನು ತಯಾರಿಸಲಾಗಿದೆ. ಈ ನಕಾಶೆಯ ಬಗ್ಗೆ ಪುನಃ ಉತ್ತಮವಾದ ಆರ್ಕಿಟೆಕ್ಟ್ ಕಡೆ ಪರಿಶೀಲಿಸಲಾಗುವುದು. ಬಳಿಕ ಕಮಿಟಿಯ ಅನುಮೋದನೆ ಮಾಡಿಕೊಡಲಾಗುವುದು" ಎಂದು ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
"ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್, ಕುಡಿಯುವ ನೀರು, ಸ್ನಾನ ಗೃಹ, ಶೌಚಾಲಯ ನಿರ್ಮಿಸಬೇಕು ಎನ್ನುವುದು ಸೇರಿದಂತೆ ಸಭೆಯಲ್ಲಿ ಕೇಳಿ ಹಲವಾರು ಸಲಹೆಗಳ ಬಗ್ಗೆ ಚರ್ಚಿಸಿ, ಮಾಸ್ಟರ್ ಪ್ಲಾನ್ ಮಾಡಿಕೊಂಡು, ಈ ಪ್ಲಾನ್ ಬಗ್ಗೆ ಕಮೀಟಿಯಲ್ಲಿ ಅನುಮತಿ ಪಡೆದು ಕೆಲಸ ಆರಂಭಿಸಲಾಗುತ್ತದೆ" ಎಂದರು.
ಸಭೆಯಲ್ಲಿ 2022-23ನೇ ಸಾಲಿನಲ್ಲಿ ದೇವಸ್ಥಾನಕ್ಕೆ 14 ಕೋಟಿ ರೂ. ಆದಾಯ ಬಂದಿದೆ. ಈ ಪೈಕಿ ಈಗಾಗಲೇ 9 ಕೋಟಿ ಖರ್ಚಾಗಿದೆ. ದೇವಸ್ಥಾನದಲ್ಲಿ 55 ಕೋಟಿ ರೂ.ಠೇವಣಿ ಇದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ಮಾಹಿತಿ ನೀಡಿದರು.
ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಬರೀ ನೂರಾರು ಶೌಚಾಲಯಗಳನ್ನು ನಿರ್ಮಾಣ ಮಾಡಿದರೆ ಅವು ಸಾಲದು. ಎ ಬ್ಲಾಕ್, ಬಿ ಬ್ಲಾಕ್, ಸಿ ಬ್ಲಾಕ್, ಡಿ ಬ್ಲಾಕ್ ಎಂಬುದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಲಾಕ್‌ಗಳನ್ನು ಮಾಡಿ, ಪ್ರತಿಯೊಂದು ಬ್ಲಾಕ್‌ಗೂ ಪ್ರತ್ಯೇಕವಾಗಿ ವಾಹನಕ್ಕೆ ಪಾರ್ಕಿಂಗ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವ ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದು ಸಲಹೆ ಕೇಳಿ ಬಂದಿತು.












Click it and Unblock the Notifications