Gavisiddeshwar Jatre 2025: ಇಂದಿನಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ: ಈ ಬಾರಿಯ ವಿಶೇಷತೆಯೇನು?
ಕೊಪ್ಪಳ, ಜನವರಿ 15: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮುಹೋತ್ಸವ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯಲಿರುವ ಅಜ್ಜನ ಜಾತ್ರೆ ಕಣ್ತುಂಬಿಕೊಳ್ಳಲು, ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ. ನಿನ್ನೆ ರಾತ್ರಿಯಿಂದಲೇ ಸಾವಿರಾರು ಭಕ್ತರು ಜಾತ್ರೆಗಾಗಿ ಆಗಮಿಸಿದ್ದು, ಸಂಜೆಯ ವೇಳೆಗೆ ಮೂರು ಪಟ್ಟು ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ.
ಈ ಬಾರಿ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸಕ್ಕೆ ಧಾರವಾಡದ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ ಪದ್ಮಶ್ರೀ ಎಂ.ವೆಂಕಟೇಶ ಕುಮಾರ್ ಚಾಲನೆ ನೀಡಲಿದ್ದಾರೆ. ಬಳಿಕ ಕೈಲಾಸ ಮಂಟಪದಲ್ಲಿ ಜಾತ್ರಾ ಮುಹೋತ್ಸವ ಉದ್ಘಾಟನೆ ಸಮಾರಂಭ ನಡೆಯಲಿದ್ದು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೊಪ್ಪಳದ ಆರಾಧ್ಯ ದೈವ ಗವಿಸಿದ್ದೇಶ್ವರರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಒಂದು ವಿಶೇಷತೆಗೆ ಗವಿಸಿದ್ದೇಶ್ವರರ ಜಾತ್ರಾ ಮಹಾರಥೋತ್ಸವ ಸಾಕ್ಷಿಯಾಗುತ್ತಿದೆ. ಈ ಬಾರಿಯ ವಿಶೇಷ ಎನ್ನುವಂತೆ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗಾಗಿ ಮಠದ ಆವರಣದಲ್ಲಿ 200ಕ್ಕೂ ಹೆಚ್ಚು ಬಾಣಸಿಗರು ಪ್ರಸಾದ ತಯಾರಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಗವಿಸಿದ್ದೇಶ್ವರನಿಗಾಗಿ ಈ ವರ್ಷವೂ ಮಹಾ ಪ್ರಸಾದದ ವ್ಯವಸ್ಥೆ ಆಗಿದ್ದು, 200ರಿಂದ 300 ಕ್ವಿಂಟಲ್ ಮಾದಲಿ, 50 ಕ್ವಿಂಟಲ್ ಶೇಂಗಾ ಹೋಳಿಗೆ, ಉಪ್ಪಿನಕಾಯಿ, ಸಜ್ಜೆ, ರಾಗಿ, ಜೋಳದ ರೊಟ್ಟಿಯನ್ನು ಭಕ್ತರು ಅರ್ಪಿಸಿದ್ದಾರೆ.
ಇನ್ನು ಭಕ್ತರಿಗಾಗಿ 450 ಕ್ವಿಂಟಲ್ ಜಿಲೇಬಿ ಹಾಗೂ ರಥೋತ್ಸವದ ಮಾರನೇ ದಿನ ಪ್ರತಿ ಬಾರಿಯಂತೆ 5 ಲಕ್ಷ ಮಿರ್ಚಿ ಬಜ್ಜಿ ತಯಾರಿಸುವ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಭಕ್ತರಿಗಾಗಿ ವಸತಿ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಈ ಬಾರಿ ಉತ್ತಮವಾಗಿ ಮಾಡಲಾಗಿದೆ.

ಜಾತ್ರಾ ಮುಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಗಣ್ಯರು
ಪಂಡಿತ ಪದ್ಮಶ್ರೀ ಎಂ.ವೆಂಕಟೇಶ ಕುಮಾರ್ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸಕ್ಕೆ ಚಾಲನೆ ನೀಡಲಿದ್ದು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ಇರಲಿದೆ. ಇನ್ನು ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಭಾಗಿಯಾಗಲಿದ್ದಾರೆ.
ಇನ್ನು ಜಾತ್ರಾ ಮಹಾರಥೋತ್ಸದ ಮನೋರಂಜನೆಯ ಭಾಗವಾಗಿ ಧಾರವಾಡದ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ತಂಡದವರಿಂದ ಮತ್ತು ಸರಿಗಮಪ ಖ್ಯಾತಿಯ ಗಾಯಕ ಮೈಸೂರು ಶ್ರೀಹರ್ಷ ಅವರ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications