ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಸಂಚಾರ, ದಿನಾಂಕ ನಿಗದಿ
ಕೊಪ್ಪಳ, ಏಪ್ರಿಲ್ 20: ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಮುಖವಾದ ಮಾಹಿತಿಯೊಂದಿದೆ. 257 ಕಿ. ಮೀ. ಉದ್ದದ ಗದಗ-ವಾಡಿ ರೈಲು ಮಾರ್ಗದ ಭಾಗವಾಗಿ ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಸಂಚಾರ ನಡೆಯಲಿದೆ. ಕೇಂದ್ರ ಸರ್ಕಾರ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿಯೂ ಈ ರೈಲು ಯೋಜನೆಗೆ 549.45 ಕೋಟಿ ಅನುದಾನ ನೀಡಿದೆ. ದಶಕಗಳ ಬೇಡಿಕೆ ಈಗ ಈಡೇರಿದ್ದು, ಕೆಲವು ದಿನಗಳ ಹಿಂದೆ ರೈಲಿನ ಪ್ರಾಯೋಗಿಕ ಸಂಚಾರವು ಪೂರ್ಣಗೊಂಡಿದೆ.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹುಬ್ಬಳ್ಳಿ-ಕುಷ್ಟಗಿ ರೈಲು ಆರಂಭದ ಕುರಿತು ಯಲಬುರ್ಗಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದ್ದರು. "ನಮ್ಮ ಕಲ್ಯಾಣ ಕರ್ನಾಟಕ ಭಾಗದ ಗದಗ-ವಾಡಿ ಮತ್ತು ಮುನಿರಾಬಾದ್-ಮಹೆಬೂಬನಗರ ರೈಲ್ವೆ ಮಾರ್ಗ ಯೋಜನೆಯಗಳು ಮುಂಬರುವ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ" ಎಂದು ಹೇಳಿದ್ದರು.

"ಗದಗ-ವಾಡಿ ರೈಲು ಮಾರ್ಗ ಯೋಜನೆಯಲ್ಲಿ ತಳಕಲ್‌ನಿಂದ ಕುಕನೂರು, ಯಲಬುರ್ಗಾ, ಕುಷ್ಟಗಿ ತನಕ ಸುಮಾರು 58 ಕಿ. ಮೀ. ವರೆಗೆ ಕಾಮಗಾರಿಯು ಪೂರ್ಣಗೊಂಡಿದೆ. ವಾಡಿಯಿಂದ ಶಹಪುರ ತನಕ 48 ಕಿ. ಮೀ. ರೈಲು ಮಾರ್ಗ ನಿರ್ಮಾಣ 3 ರಿಂದ 6 ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಇದರಿಂದ ಒಟ್ಟು 106 ಕಿ. ಮೀ. ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಬಸವರಾಜ ರಾಯರಡ್ಡಿ ಮಾಹಿತಿ ನೀಡಿದ್ದರು.
ಗದಗ-ವಾಡಿ ರೈಲ್ವೆ ಮಾರ್ಗದ ಪೂರ್ಣಗೊಂಡಿರುವ 58 ಕಿ. ಮೀ. ರೈಲು ಮಾರ್ಗದಲ್ಲಿ ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಸೇವೆ ಆರಂಭಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಪತ್ರವನ್ನು ಬರೆದಿತ್ತು. ಈಗ ದಿನಾಂಕ ಸಹ ನಿಗದಿಯಾಗಿದ್ದು, ಜನರ ಬೇಡಿಕೆಯಂತೆ ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಸಂಚಾರವನ್ನು ನಡೆಸಲಿದೆ.
ಮೇ 10ರಿಂದ ರೈಲು ಸಂಚಾರ: ಸದ್ಯದ ಮಾಹಿತಿ ಪ್ರಕಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಸಂಚಾರ ಆರಂಭಕ್ಕೆ ಒಪ್ಪಿಗೆ ನೀಡಿದ್ದಾರೆ. ಮೇ 10 ರಿಂದ ಹುಬ್ಳಳ್ಳಿ-ಕುಷ್ಟಗಿ ನಡುವೆ ಡೆಮು ರೈಲು ಸಂಚಾರವನ್ನು ನಡೆಸಲಿದೆ. ರೈಲಿನ ವೇಳಾಪಟ್ಟಿ, ದರದ ಮಾಹಿತಿಯನ್ನು ರೈಲ್ವೆ ಇಲಾಖೆ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
ಗದಗ-ವಾಡಿ ರೈಲು ಮಾರ್ಗದ ಭಾಗವಾಗಿ ಕುಷ್ಟಗಿ ತನಕ ಕಾಮಗಾರಿ ಪೂರ್ಣಗೊಂಡಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು, ರೈಲ್ವೆ ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ವೇಗ ಮತ್ತು ವಿವಿಧ ಪರೀಕ್ಷೆಗಳನ್ನು ನಡೆಸಿದ್ದರು. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿತ್ತು ಮತ್ತು ರೈಲು ಓಡಿಸಲು ಒಪ್ಪಿಗೆಯೂ ಸಿಕ್ಕಿತ್ತು.
ಕುಷ್ಟಗಿ ರೈಲು ನಿಲ್ದಾಣದ ನಿರ್ಮಾಣ ಕಾರ್ಯವೂ ಅಂತಿಮಗೊಂಡಿದೆ. ರೈಲ್ವೆ ಇಲಾಖೆ ಇಂಜಿನಿಯರ್, ಅಧಿಕಾರಿಗಳು ಗಂಟೆಗೆ 130 ಕಿ. ಮೀ. ವೇಗದಲ್ಲಿ ಹುಬ್ಬಳ್ಳಿ-ಕುಷ್ಟಗಿ ನಡುವೆ ರೈಲು ಓಡಿಸಿ ವೇಗದ ಪರೀಕ್ಷೆ, ಅತಿಭಾರದ ಪರೀಕ್ಷೆಯನ್ನು ನಡೆಸಿದ್ದರು. ಕುಷ್ಟಗಿ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆಯೇ ಜನರು ಸಂಭ್ರಮಿಸಿದ್ದರು, ಅಧಿಕಾರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು.
ಗದಗ-ವಾಡಿ ಉತ್ತರ ಕರ್ನಾಟಕ ಭಾಗದ ಪ್ರಮುಖ ರೈಲು ಯೋಜನೆಯಾಗಿದೆ. ಈ ರೈಲು ಮಾರ್ಗದ ವೆಚ್ಚ 1922 ಕೋಟಿ ರೂ.ಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50ರಷ್ಟು ವೆಚ್ಚ ಹಂಚಿಕೆ ಆಧಾರದ ಮೇಲೆ ಯೋಜನೆಯನ್ನು ನಿರ್ಮಾಣ ಮಾಡುತ್ತಿವೆ.
ಕೆಲವು ದಿನಗಳ ಹಿಂದೆ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ ಗದಗ- ವಾಡಿ ನಡುವಿನ 257 ಕಿ. ಮೀ. ರೈಲು ಮಾರ್ಗವನ್ನು 2026ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದರು.
ಈ ಮಾರ್ಗದಲ್ಲಿ ಗದಗ-ತಳಕಲ್ ಹಳಿ ಇತ್ತು. ತಳಕಲ್-ಕುಷ್ಟಗಿ ನಡುವಿನ 57 ಕಿ. ಮೀ. ರೈಲು ಮಾರ್ಗದ ಕಾಮಗಾರಿ ಹನುಮಾಪುರ ತನಕ ಮುಗಿದಿತ್ತು. ಈಗ ಕುಷ್ಟಗಿ ತನಕ ಕಾಮಗಾರಿಯನ್ನು ಮುಗಿಸಿ, ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಆದ್ದರಿಂದ ಹುಬ್ಬಳ್ಳಿ-ಕುಷ್ಟಗಿ ತನಕ ರೈಲು ಓಡಿಸಲು ಸಹಾಯಕವಾಗಿದೆ.











Click it and Unblock the Notifications