ಬಲ್ಡೋಟಾ ಕಾರ್ಖಾನೆ: ಕೊಪ್ಪಳ ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತಾ?
ಕೊಪ್ಪಳ, ಮಾರ್ಚ್, 05: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಆರಂಭಕ್ಕೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೂ ಕೂಡ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಕೊನೆಗೂ ಸರ್ಕಾರ ಇಲ್ಲಿ ಕಾರ್ಖಾನೆ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಜನರ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಕೊಪ್ಪಳ ಪಟ್ಟಣದ ಬಳಿ ಬಲ್ಡೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸ್ಥಾಪನೆ ಆರಂಭಿಸುವ ಉಕ್ಕು ಮತ್ತು ವಿದ್ಯುತ್ ಸ್ಥಾವರದ ಕಾಮಗಾರಿಯನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಪರಿಸರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಉಕ್ಕು ಸ್ಥಾವರ ಆರಂಭದಿಂದ ಕೊಪ್ಪದಲ್ಲಿ ಪರಿಸರಕ್ಕೆ ಹಾನಿ ಆಗುತ್ತದೆ. ಈ ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.
ಇನ್ನು ಕಳೆದ ತಿಂಗಳಷ್ಟೇ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ 54,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾವರವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.
ಈ ಕಾರ್ಖಾನೆ ಸ್ಥಾಪನೆ ಆದರೆ, ಮಾಲಿನ್ಯ ಮತ್ತಷ್ಟು ಹೆಚ್ಚಳ ಆಗುತ್ತದೆ ಎಂದು ಅಲ್ಲಿನ ಸ್ಥಳೀರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗಾಗಲೇ ಪಟ್ಟಣ ಅನೇಕ ಕೈಗಾರಿಕೆಗಳಿಂದಾಗಿ ಅನಾರೋಗ್ಯದಂತಹ ಅಪಾಯವನ್ನು ಎದುರಿಸುತ್ತಿದೆ ಎಂದು ದೂರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮತ್ತು ಇತರರು ಸ್ಥಾವರದ ಅಪಾಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದರು. ಬಳಿಕ ಸಿಎಂ ತಕ್ಷಣವೇ ಕೊಪ್ಪಳ ಜಿಲ್ಲಾಧಿಕಾರಿಗೆ ಕಾಮಗಾರಿ ಸಂಬಂಧ ಎಲ್ಲಾ ಪೂರ್ವಸಿದ್ಧತಾ ಕಾರ್ಯಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಯೋಜನೆಗೆ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆಗೆ ಚರ್ಚಿಸಿ ವಿವರವಾದ ವರದಿ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯಾ ಹೇಳಿದ್ದಾರೆ. ಫೆಬ್ರವರಿ 24ರಂದು ಕೊಪ್ಪಳ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು ಮತ್ತು ಕಾರ್ಯಕರ್ತರು ತಾಲ್ಲೂಕು ಕ್ರೀಡಾಂಗಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯ ಹೊರತಾಗಿಯೂ ಉಕ್ಕಿನ ಕಂಪನಿಯ ಆಡಳಿತ ಮಂಡಳಿಯು ಭೂಮಿ ಪೂಜೆ ನೆರವೇರಿಸಿದೆ ಎಂದು ಮಂಗಳವಾರ ಪರಿಸರವಾದಿಗಳು ತಿಳಿಸಿದ್ದಾರೆ. ನಾವು ಅಭಿವೃದ್ಧಿಯನ್ನು ವಿರೋಧಿಸುವುದಿಲ್ಲ, ಆದರೆ ಉಕ್ಕಿನ ಸ್ಥಾವರ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಏಕೆಂದರೆ, ಅದು ಜನರಿಗೆ ಆರೋಗ್ಯಕ್ಕೆ ಅಪಾಯವನ್ನು ಉಂಡು ಮಾಡುತ್ತದೆ ಎಂದು ಹೇಳಿದರು.
ಇನ್ನು ಭಾನುವಾರ ಕೊಪ್ಪಳ ನಗರಕ್ಕೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು, ಈ ವೇಳೆ ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸದಂತೆ ಸ್ಥಳೀಯರು ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಬಲ್ಡೋಟಾ ಕಾರ್ಖಾನೆ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಮುಂದೆ ಈ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದರು.
ಅಲ್ಲದೆ, ನಾನು ರಾಜ್ಯ ಸರ್ಕಾರಕ್ಕೆ ಜನರಿಗೆ ತೊಂದರೆಯಾಗುವ ಯೋಜನೆ ಬೇಡ ಎಂದು ಹೇಳಿದ್ದೇನೆ. ಗವಿಮಠದ ಶ್ರೀಗಳ ನೇತೃತ್ವದಲ್ಲಿ ಪಕ್ಷಬೇಧ ಮರೆತು ಬಂದ್ ಮಾಡಿದ್ದಾರೆ. ಈ ವಿಚಾರಕ್ಕೆ ಜನರ ಜೊತೆ ಸರ್ಕಾರ ಚರ್ಚೆ ಮಾಡಬೇಕೆಂದು ಹೇಳಿದ್ದರು.












Click it and Unblock the Notifications