ಬೆಲೆ ಏರಿಕೆ; ಕಾಂಗ್ರೆಸ್ ಕಡೆ ಕೈ ತೋರಿಸಿದ ಸಂಗಣ್ಣ ಕರಡಿ!
ಕೊಪ್ಪಳ, ಸೆಪ್ಟೆಂಬರ್ 01; ತೈಲ ಉತ್ಪನ್ನಗಳ ಬೆಲೆ ಏರಿಕೆ, ಸಿಲಿಂಡರ್‌ಗಳ ಬೆಲೆ ಏರಿಕೆಯಾಗಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸಂಸದರೊಬ್ಬರು ಉಡಾಫೆ ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಎಲ್‌ಪಿಜಿ ಸಿಲಿಂಡರ್ ಬೆಲೆ 25 ರೂ. ಏರಿಕೆಯಾಗಿದೆ.
ಕೊಪ್ಪಳದಲ್ಲಿ ಬುಧವಾರ ಮಾತನಾಡಿದ ಸಂಸದ ಸಂಗಣ್ಣ ಕರಡಿ, "ನಿಮ್ಮಪ್ಪ ಸಾಲ ಮಾಡಿದರೆ ಮಗನಾಗಿ ನೀನು ಸಾಲ ತೀರಿಸ್ತಿಯಾ, ಇಲ್ಲವಾ?. ನಾವು ಕೂಡಾ ಹಂಗೆ ಸಾಲ ತೀರಿಸುತ್ತಿದ್ದೇವೆ" ಎಂದು ಹೇಳಿದರು.
ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸಂಸದರು ಉಡಾಫೆಯಾಗಿ ಉತ್ತರ ಕೊಟ್ಟರು. "ಸಾಲ ಮಾಡಿಯಾಗಿದೆ, ಈಗ ಸಾಲ ಹರಿಬೇಕಲ್ಲ" ಎಂದರು.

"ಯುಪಿಎ ಸರ್ಕಾರ ಇದ್ದಾಗ ತೈಲ ಕಂಪನಿಗಳಿಗೆ ಬಾಂಡ್ ಕೊಟ್ಟಿದ್ದರು. ನಮ್ಮ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನೂ ಒಂದು ಲಕ್ಷ ಕೋಟಿ ಬಾಕಿ ಇದೆ" ಎಂದು ಸಂಸದರು ವಿವರಿಸಿದರು.
"ಬಡವರಿಗೆ ಏನು ಸಹಾಯ ಮಾಡಬೇಕೋ ಮಾಡಿದ್ದೇವೆ. ಜನರು ಸಾಲ ಮಾಡಬೇಕಾ ಕೇಳಿದರೆ ಏನು ಹೇಳೋದು. ನಾವು ದೇಶ ಒತ್ತೆ ಇಡಬೇಕಾ?, ಬಡವರ ಬಗ್ಗೆ ಮಾಧ್ಯಮದವರು ಕೇಳುವುದನ್ನು ಒಪ್ಪುತ್ತೇವೆ. ಆದರೆ ಸರ್ಕಾರ ನಡೆಸಬೇಕಲ್ಲ. ಕೋವಿಡ್‌ನಿಂದ ಸರ್ಕಾರಕ್ಕೆ ಏನೂ ಆದಾಯವಿಲ್ಲವಾಗಿದೆ" ಎಂದು ಸಂಸದರು ಹೇಳಿದರು.
ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗಿವೆ. ಈಗ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಸಹ ಹೆಚ್ಚಾಗಿದ್ದು, ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಜನರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿಲಿಂಡರ್ ಬೆಲೆ ಏರಿಕೆ; ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರುವಂತೆ 25 ರೂ. ಜಾಸ್ತಿಯಾಗಿದೆ. 15 ದಿನಗಳ ಹಿಂದೆ 25 ರೂ. ಏರಿಕೆಯಾಗಿತ್ತು. ಇದರಿಂದಾಗಿ ಜನರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಜನವರಿ 1ರಿಂದ ಸೆಪ್ಟೆಂಬರ್ 1ರ ತನಕ 190 ರೂ. ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ ಸಿಲಿಂಡರ್ ಬೆಲೆ 887ಕ್ಕೆ ಏರಿಕೆಯಾಗಿದೆ.











Click it and Unblock the Notifications