ಅಂಜನಾದ್ರಿ; ಡಿಸೆಂಬರ್ 23, 24ರಂದು ಹನುಮ ಮಾಲಾ ಕಾರ್ಯಕ್ರಮ
ಕೊಪ್ಪಳ, ಡಿಸೆಂಬರ್ 15; ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಹನುಮ ಮಾಲಾ ಕಾರ್ಯಕ್ರಮಕ್ಕೆ ತಯಾರಿ ನಡೆಸಿದೆ. ಈ ಬಾರಿಯ ಹನುಮ ಮಾಲಾ ಉತ್ಸವದ ಕಾರ್ಯಕ್ರಮಗಳು ಡಿಸೆಂಬರ್ 23 ಮತ್ತು 24 ರಂದು ನಡೆಯಲಿವೆ.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಹನುಮ ಮಾಲಾ ಕಾರ್ಯಕ್ರಮದ ಅಂಗವಾಗಿ ವಿವಿಧ ಸಮಿತಿ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಆಂಜನೇಯ ದೇವಾಲಯಕ್ಕೆ ಡಿಸೆಂಬರ್ 23 ಮತ್ತು 24ರಂದು ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಬಂದು ವಾಸ್ತವ್ಯ ಮಾಡಲಿದ್ದಾರೆ. ಕಾಲ್ನಡಿಗೆ ಮೂಲಕ ದೇವರ ದರ್ಶನ ಪಡೆಯಲಿದ್ದಾರೆ. ಗಂಗಾವತಿ ನಗರದಿಂದ ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ಹಾಗೂ ಡಿಸೆಂಬರ್ 24 ರಂದು ಮಾಲೆ ವಿಸರ್ಜನೆ ಕಾರ್ಯಕ್ರಮವಿದೆ.
ಹನುಮ ಮಾಲೆ ಕಾರ್ಯಕ್ರಮದ ಸಂದರ್ಭದಲ್ಲಿ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಇದಕ್ಕಾಗಿ ಕೊಪ್ಪಳ ಉಪ ವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆಹಾರ ವ್ಯವಸ್ಥೆ, ಜನಸಂದಣಿ ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಸಮಿತಿಗಳ ರಚನೆ ಮಾಡಲಾಗಿದೆ.
ಭಕ್ತರಿಗೆ ಅಗತ್ಯ ವ್ಯವಸ್ಥೆಗಳು; ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿ ಸಹ ಈಗಾಗಲೇ ಅಧಿಕಾರಿಗಳ ಸಭೆಯನ್ನು ನಡೆಸಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಭಕ್ತಾದಿಗಳ ಊಟದ ವ್ಯವಸ್ಥೆಗಾಗಿ ಅಗತ್ಯವಿರುವ ಸ್ಥಳಗಳಲ್ಲಿ ಪೆಂಡಾಲ್ ಹಾಕಲಾಗುತ್ತದೆ. ದೇವಸ್ಥಾನದ ಪಾದಗಟ್ಟಿ ಹತ್ತಿರ ಎಲ್‌ಇಡಿ ಪರದೆ, ದೇವಸ್ಥಾನದ ಮೆಟ್ಟಿಲುಗಳ ಮೇಲೆ ಧ್ವನಿ ವರ್ಧಕಗಳ ವ್ಯವಸ್ಥೆನ್ನು ಮಾಡಲು ಸೂಚನೆ ನೀಡಲಾಗಿದೆ.
ದೇವಸ್ಥಾನದ ಹತ್ತಿರ, ವಾಹನ ನಿಲುಗಡೆ ಸ್ಥಳ, ಬಸ್ ನಿಲ್ದಾಣ ಹಾಗೂ ಇನ್ನಿತರ ಅಗತ್ಯವಿರುವ ಸ್ಥಳಗಳಲ್ಲಿ ಸಾರ್ವಜನಿಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸುವುದು. ಪೆಂಡಾಲ್ ಹಾಕಿಸುವುದು ಹಾಗೂ ಸಾರ್ವಜನಿಕ ಪ್ರಕಟಣೆ ಸಲುವಾಗಿ ಧ್ವನಿವರ್ಧಕಗಳ ವ್ಯವಸ್ಥೆ, ತುಂಗಭದ್ರಾ ನದಿ ಪಾತ್ರದಲ್ಲಿ ಹನುಮ ಮಾಲಾಧಾರಿಗಳಿಗೆ ಸ್ನಾನಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಆಹಾರ ಹಾಗೂ ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯ ಆಹಾರ ಸಮಿತಿ ಭಕ್ತಾದಿಗಳಿಗೆ ದೇವಸ್ಥಾನದ ಹಿಂಭಾಗದಲ್ಲಿರುವ ವೇದ ಪಾಠಶಾಲಾ ಹತ್ತಿರ ಆಹಾರ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನದ ಹತ್ತಿರ ವಾಹನ ನಿಲುಗಡೆ ಸ್ಥಳ ಹಾಗೂ ಅಗತ್ಯವಿರುವೆಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದೇವರ ದರ್ಶನಕ್ಕೆ ಸರದಿಯಲ್ಲಿ ಹೋಗುವ ಭಕ್ತರಿಗೆ ಅವಶ್ಯಕತೆಗನುಗುಣವಾಗಿ ಅಗತ್ಯವಿರುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿದೆ. ಭಕ್ತಾದಿಗಳಿಗೆ ಹಾಗೂ ಕರ್ತವ್ಯ ನಿರತ ಸಿಬ್ಬಂದಿ, ಸ್ವಯಂ ಸೇವಕರಿಗೆ ಅವಶ್ಯಕತೆಗನುಗುಣವಾಗಿ ಆಹಾರದ ಪ್ಯಾಕೆಟ್‌ಗಳನ್ನು ತಯಾರಿಸಿ ಸರಬರಾಜು ಮಾಡಲಿದೆ.
ಹೊಸಪೇಟೆ, ಗಂಗಾವತಿ ಹಾಗೂ ಕೊಪ್ಪಳ ಕಡೆಯಿಂದ ಅಂಜನಾದ್ರಿ ದೇವಸ್ಥಾನಕ್ಕೆ ಬರುವ ರಸ್ತೆಗಳಲ್ಲಿ ಇರುವ ತಗ್ಗು, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತಲೂ ಹಾಗೂ ವಾಹನ ನಿಲುಗಡೆ ಸ್ಥಳ ಮತ್ತು ಅಗತ್ಯವಿರುವ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಆರೋಗ್ಯ ಸಮಿತಿಯು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಿಮಿನಾಶಕ ಸಿಂಪಡಣೆ, ಅಗತ್ಯ ಔಷಧಿಗಳ ವ್ಯವಸ್ಥೆ, ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಿದೆ.
ಗಂಗಾವತಿ ನಗರದಿಂದ ಹನುಮಮಾಲಾಧಾರಿಗಳ ಶೋಭಾ ಯಾತ್ರೆ ಆರಂಭವಾಗುವ ಕಾರಣ ನಗರದ ಎಲ್ಲ ಕಡೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಪ್ರಸಾದ ವಿತರಣಾ ಸಮಿತಿಯು ದೇವಸ್ಥಾನದ ಮುಂಭಾಗ ಹಾಗೂ ವೇದ ಪಾಠಶಾಲೆ ಹತ್ತಿರ ಲಡ್ಡು ವಿತರಣೆ ಮಾಡುವುದನ್ನು ಮೇಲ್ವಿಚಾರಣೆ ಮಾಡಲಿದೆ. ಲಡ್ಡು ಪಡೆಯುವ ಸಲುವಾಗಿ ಸಂಗ್ರಹವಾಗುವ ಹಣಕಾಸಿನ ವ್ಯವಹಾರದ ಬಗ್ಗೆ ಮೇಲ್ವಿಚಾರಣೆ ಮಾಡಲು ಸೂಚನೆ ಕೊಡಲಾಗಿದೆ.
ಸಾರಿಗೆ ಸಮಿತಿಯು ಕೊಪ್ಪಳ, ಗಂಗಾವತಿ, ಹೊಸಪೇಟೆ ಹಾಗೂ ಇತರೆ ಅಗತ್ಯವಿರುವ ಸಾರಿಗೆ ಘಟಕಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೌಕರ್ಯವನ್ನು ಕಲ್ಪಿಸಲಿದೆ. ವಾಹನ ನಿಲುಗಡೆ ಸ್ಥಳದಿಂದ ಅಂಜನಾದ್ರಿ ಬೆಟ್ಟಕ್ಕೆ ಭಕ್ತಾದಿಗಳ ಸಂಚಾರಕ್ಕೆ ಮಿನಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ. 24*7 ಮಾದರಿಯಲ್ಲಿ ವಿದ್ಯುತ್ ಸೌಕರ್ಯದ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಸಾಮಗ್ರಿಗಳುಳ್ಳ ಒಂದು ಮೊಬೈಲ್ ವಾಹನದ ವ್ಯವಸ್ಥೆ ಮಾಡಲಾಗುತ್ತದೆ.
ಭದ್ರತಾ ಸಮಿತಿ ನೂಕುನುಗ್ಗಲು, ಗಲಾಟೆ ಹಾಗೂ ಘರ್ಷಣೆ ಆಗದಂತೆ ಕ್ರಮ ವಹಿಸಲಿದೆ. ಭದ್ರತೆಗಾಗಿ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಬಕಾರಿ ಸಮಿತಿಯು ಡಿಸೆಂಬರ್ 22ರ ಸಂಜೆ 4 ಗಂಟೆಯಿಂದ ಡಿಸೆಂಬರ್ 24 ರ ಮಧ್ಯರಾತ್ರಿಯವರೆಗೆ ಆನೆಗುಂದಿ ಗ್ರಾಮ ವ್ಯಾಪ್ತಿಯಿಂದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯಪಾನ ನಿಷೇಧಿಸಲಿದೆ.












Click it and Unblock the Notifications