Breaking: ಸಚಿವ ಸ್ಥಾನದಿಂದ ಬಂಧಿತ ಆರೋಪಿ ಪಾರ್ಥ ಚಟರ್ಜಿ ವಜಾ
ನವದೆಹಲಿ, ಜುಲೈ 28: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ಹಗರಣದ ಆರೋಪಿ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ, ಪಾರ್ಥ ಚಟರ್ಜಿ ಅವರು ಜುಲೈ 28 ರಿಂದ ಜಾರಿಗೆ ಬರುವಂತೆ ತಮ್ಮ ಇಲಾಖೆಗಳ ಉಸ್ತುವಾರಿ ಕರ್ತವ್ಯಗಳಿಂದ ಮುಕ್ತರಾಗಿದ್ದಾರೆ ಎಂದಿದೆ.
ಪಶ್ಚಿಮ ಬಂಗಾಳ ಸಚಿವ ಸಂಪುಟದಲ್ಲಿ ಪಾರ್ಥ ಚಟರ್ಜಿ ಅವರು ಕಾಮರ್ಸ್ ಮತ್ತು ಇಂಡಸ್ಟ್ರಿ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಸಂಸದೀಯ ವ್ಯವಹಾರ, ಪಬ್ಲಿಕ್ ಎಂಟರ್ ಪ್ರೈಸಸ್ ಮತ್ತು ಇಂಡಸ್ಟ್ರಿಯಲ್ ರೀಕನ್ಸ್ಟ್ರಕ್ಷನ್ (ಕೈಗಾರಿಕಾ ಪುನರ್ನಿರ್ಮಾಣ) ಖಾತೆ ಹೊಂದಿದ್ದರು.

ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರಾಜ್ಯ ಸಚಿವ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಗಳು ಬಂದಿದ್ದವು. ಕಾಂಗ್ರೆಸ್ ಕೂಡ ಮಂಗಳವಾರ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿತ್ತು.
ಸ್ವಪಕ್ಷದಲ್ಲೇ ಸಚಿವರ ವಿರುದ್ಧ ಆಕ್ರೋಶ ಉಂಟಾಗಿತ್ತು. ಸಚಿವ ಪಾರ್ಥ ಚಟರ್ಜಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಒತ್ತಾಯಿಸಿದ್ದರು.
ಬಂಧಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತ ಮುಖರ್ಜಿ ಮನೆಯಿಂದ ನಗದು ವಶಪಡಿಸಿಕೊಂಡಿರುವುದು ಪಕ್ಷಕ್ಕೆ "ಅಪಮಾನ" ಮತ್ತು "ನಮ್ಮೆಲ್ಲರಿಗೂ ಅವಮಾನ" ತಂದಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಅಸಮಾಧಾನ ವ್ಯಕ್ತಪಡಿಸಿದ್ದರು.

ರಾಜ್ಯ ಕ್ಯಾಬಿನೆಟ್‌ನಿಂದ ಚಟರ್ಜಿ ಅವರನ್ನು ವಜಾಗೊಳಿಸುವಂತೆ ಪ್ರತಿಪಕ್ಷಗಳು ಒತ್ತಡ ಹಾಕುತ್ತಿದ್ದ ನಡುವೆ, ಟಿಎಂಸಿ ಸಾರ್ವಜನಿಕ ಗ್ರಹಿಕೆಯನ್ನು ಗಮನಿಸಬೇಕು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕುನಾಲ್ ಘೋಷ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪಾರ್ಥ ಚಟರ್ಜಿ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಬಹುದು ಎಂಬ ಊಹಾಪೋಹಗಳು ಇದ್ದವು.












Click it and Unblock the Notifications