ಮಮತಾ ಸರ್ಕಾರಕ್ಕೆ ಮುಖಭಂಗ: ರಥಯಾತ್ರೆ ನಡೆಸಲು ಬಿಜೆಪಿಗೆ ಅನುಮತಿ
ಕೋಲ್ಕತಾ, ಡಿಸೆಂಬರ್ 20: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಮೂರು ರಥಯಾತ್ರೆಗಳನ್ನು ನಡೆಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ.
ಇದರಿಂದ ಬಿಜೆಪಿಯ ರಥಯಾತ್ರೆಗೆ ಅವಕಾಶ ನೀಡದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಮೂರು 'ಪ್ರಜಾಪ್ರಭುತ್ವ ಉಳಿಸಿ' ರ‍್ಯಾಲಿಗಳನ್ನು ನಡೆಸಲು ಉದ್ದೇಶಿಸಿದೆ.
ರಾಜ್ಯದ ಉತ್ತರ ಭಾಗದ ಕೂಚ್ ಬಿಹಾರದಿಂದ, ದಕ್ಷಿಣದ ಕಕ್ ದ್ವೀಪದಿಂದ ಹಾಗೂ ಬೀರ್ಭುಮ್ ಜಿಲ್ಲೆಯ ತಾರಾಪೀಠ ದೇವಸ್ಥಾನದಿಂದ ಮತ್ತೊಂದು ರ‍್ಯಾಲಿ ಹೊರಡಲಿದೆ.

42 ಲೋಕಸಭೆ ಕ್ಷೇತ್ರಗಳು
ಈ ರ‍್ಯಾಲಿಗಳು ಬಂಗಾಳದ ಎಲ್ಲ 42 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಂಚರಿಸಲಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ನೆಲೆ ಹೊಂದಿಲ್ಲ. ಕಮ್ಯುನಿಸ್ಟ್ ಪರ ಒಲವು ಹೆಚ್ಚಿರುವ ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೂಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಆಯೋಜಿಸಿರುವ ರಥಯಾತ್ರೆ ಮಹತ್ವ ಪಡೆದಿದೆ.

ಮಮತಾ ಆಕ್ಷೇಪಣೆ ತಿರಸ್ಕಾರ
ಮುಂದಿನ ಲೋಕಸಭೆ ಚುನಾವಣೆಯ ಪ್ರಚಾರದ ಸಲುವಾಗಿ ರಥಯಾತ್ರೆಗಳನ್ನು ಆಯೋಜಿಸಲು ಬಿಜೆಪಿ ಉದ್ದೇಶಿಸಿದೆ. ರಥಯಾತ್ರೆಯಿಂದ ಕೋಮು ಗಲಭೆಗೆ ಪ್ರಚೋದನೆ ಉಂಟಾಗಬಹುದು ಎಂದು ಮಮತಾ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಸರ್ಕಾರದ ವಾದವನ್ನು ತಿರಸ್ಕರಿಸಿದ ಕೋರ್ಟ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದೆ.

22 ಸೀಟು ಗೆಲ್ಲುವ ಗುರಿ
ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 22 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ರಾಜ್ಯದಲ್ಲಿ ಬಿಜೆಪಿ ಬೆಳೆಯಲಿದೆ ಎಂಬ ಭಯದಿಂದ ಮಮತಾ ಬ್ಯಾನರ್ಜಿ ಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ, ರಾಜ್ಯದಲ್ಲಿನ ರಥಯಾತ್ರೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದರು.

ಚುನಾವಣಾ ಸಮೀಕ್ಷೆ ವರದಿ
42 ಸೀಟುಗಳಿರುವ ಪಶ್ಚಿಮ ಬಂಗಾಳದಲ್ಲಿ ಮೋದಿ ಹವಾದ ನಡುವೆಯೂ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಕೇವಲ ಎರಡು ಸೀಟುಗಳನ್ನು ಗೆಲ್ಲುವುದು ಸಾಧ್ಯವಾಗಿತ್ತು. ಆದರೆ, ಈ ಬಾರಿ ಬಂಗಾಳದಲ್ಲಿ ಬಿಜೆಪಿ ಹಿಂದೆಂದಿಗಿಂತ ಶಕ್ತಿಯುತವಾಗಿ ಬೆಳೆಯಲಿದೆ ಎಂದು ಚುನಾವಣಾ ಸಮೀಕ್ಷೆಗಳು ಹೇಳಿದ್ದವು.
ಕಳೆದ ತಿಂಗಳ ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯ ಪ್ರಕಾರ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 2019ರ ಚುನಾವಣೆಯಲ್ಲಿ ಎಂಟು ಸ್ಥಾನಗಳನ್ನು ಗೆದ್ದುಗೊಳ್ಳಲಿದೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಇನ್ನೂ ಹೆಚ್ಚಿನ ಸೀಟುಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.












Click it and Unblock the Notifications