ಬಿಜೆಪಿಯನ್ನು ಮಣಿಸಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು: ಮಮತಾ
ಕೋಲ್ಕತ್ತಾ, ಫೆಬ್ರವರಿ 2: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರತಿಯೊಂದು ಪ್ರಾದೇಶಿಕ ಪಕ್ಷವೂ ಬಿಜೆಪಿ ವಿರುದ್ಧ ಹೋರಾಡಬೇಕು, ಬಿಜೆಪಿಯನ್ನು ಸೋಲಿಸಬೇಕು ಎಂಬುದೇ ಮುಖ್ಯ ಗುರಿಯಾಗಬೇಕು, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಅನ್ನು ಸೋಲಿಸಲು ನಮಗೆ ಸಾಧ್ಯವಾಗಿದೆ ಎಂದಾದರೆ ರಾಷ್ಟ್ರಪಟ್ಟದಲ್ಲಿ ಬಿಜೆಪಿಯನ್ನು ಸೋಲಿಸುವುದು ಅಷ್ಟು ಕಷ್ಟವಾಗುವುದಿಲ್ಲ ಎಂದರು.
ಪಕ್ಷದ ಮುಖ್ಯಸ್ಥೆಯಾಗಿ ಆಯ್ಕೆಗೊಂಡ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ, ಮೇಘಾಲಯ ಹಾಗೂ ಚಂಡೀಗಢದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾಂಗ್ರೆಸ್ ನೆರವಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತನ್ನ ಅಹಂಕಾರದಿಂದಾಗಿ ಆ ಪಕ್ಷ ಹಿಂದೆ ಕೂರಲು ಇಚ್ಛಿಸಿದೆ, ಅದಕ್ಕೆ ನಮ್ಮ ಪಕ್ಷವನ್ನು ದೂರಬಾರದು, ಅಗತ್ಯ ಎನಿಸಿದರೆ ಟಿಎಂಸಿ ಏಕಾಂಗಿಯಾಗಿಯೇ ಬಿಜೆಪಿ ವಿರುದ್ಧ ಹೋರಾಡಲಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿದ್ದಾರೆ. ಮಮತಾ ಅವರನ್ನು ಪಕ್ಷ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ, ಐದು ವರ್ಷಗಳ ಬಳಿಕ ನಡೆದ ಆಂತರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ಪರವಾಗಿ ಒಟ್ಟು 48 ಪ್ರತಿಪಾದಕರು ಮತ್ತು ಅನುಮೋದಕರು ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ನಾಮನಿರ್ದೇಶನವಿಲ್ಲದ ಕಾರಣ ಮಮತಾ ಬ್ಯಾನರ್ಜಿ ಅವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಮಾತ್ರ ಬಾಕಿ ಇದ್ದು, ಪಕ್ಷಕ್ಕೆ ಮಮತಾ ಬ್ಯಾನರ್ಜಿ ಅವರ ಮಾರ್ಗದರ್ಶನದ ಅಗತ್ಯವಿದೆ. ಹೀಗಾಗಿ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಪಾರ್ಥ ಚಟರ್ಜಿ ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಜಯಭೇರಿಗೆ ಮಮತಾ ಬ್ಯಾನರ್ಜಿ ಅವರ ನಾಯಕತ್ವವೇ ಕಾರಣ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸೆಣೆಸುವ ಶಕ್ತಿಯನ್ನು ಮಮತಾ ಬ್ಯಾನರ್ಜಿ ಟಿಎಂಸಿಗೆ ಒದಗಿಸಿ ಕೊಟ್ಟಿದ್ದಾರೆ ಎಂದು ಪಾರ್ಥ ಚಟರ್ಜಿ ನುಡಿದರು.












Click it and Unblock the Notifications