40 ಸಾವಿರ ಕೋಟಿ ಹಗರಣದಲ್ಲಿ ಮಮತಾ ಕೂಡಾ ಭಾಗಿ : ಬಿಜೆಪಿ
ನವದೆಹಲಿ, ಫೆಬ್ರವರಿ 07: ದೇಶದ ಗಮನ ಸೆಳೆದಿರುವ ಶಾರದಾ ಚಿಟ್ ಫಂಡ್ ಹಾಗೂ ರೋಸ್ ವ್ಯಾಲಿ ಹಗರಣದ ಆರೋಪಿ ರಾಜೀವ್ ಕುಮಾರ್ ಅವರನ್ನು ಉಳಿಸಲು ಖುದ್ದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಬಲಕ್ಕೆ ನಿಂತಿರುವುದು ಅಚ್ಚರಿಯ ವಿಷಯವೇ ಅಲ್ಲ. ರಾಜೀವ್ ಅವರನ್ನು ಉಳಿಸುವುದಷ್ಟೇ ಅಲ್ಲ, ಹಗರಣದ ಉರುಳು ತಮ್ಮ ಕೊರಳಿಗೆ ಸುತ್ತಿಕೊಳ್ಳದಂತೆ ನೋಡಿಕೊಳ್ಳುವುದು ಮಮತಾ ಅವರ ಯೋಜನೆಯಾಗಿದೆ ಎಂದು ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಚಿಟ್ ಫಂಡ್ ಹಗರಣದ ಮೊತ್ತ 40,000 ಕೋಟಿ ರು ದಾಟುತ್ತದೆ. ಸುಮಾರು 20,000 ಮಂದಿಯನ್ನು ಲೂಟಿ ಮಾಡಲಾಗಿದೆ. ಗಣ್ಯಾತಿಗಣ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರನ್ನು ರಕ್ಷಿಸಲು ಮಮತಾ ಅವರು ಈ ಎಲ್ಲಾ ನಾಟಕ ಮಾಡುತ್ತಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.
ಪಶ್ಚಿಮ ಬಂಗಾಳದ ಕಾಂಗ್ರೆಸ್ ಉಸ್ತುವಾರಿಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ರಾಷ್ಟ್ರಪತಿ ಆಡಳಿತ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾತ್ರ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತಿರುವುದು ಹಾಸ್ಯಾಸ್ಪದ ಎಂದರು.

ಮೋದಿ ಸರ್ಕಾರದಿಂದ ರೈತರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗುತ್ತಿರುವುದು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಅದರಲ್ಲೂ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಘೋಷಿಸಿದ ಬಳಿಕ ಕಿರಿಕಿರಿ ಹೆಚ್ಚಾಗಿದೆ ಎಂದು ಹೇಳಿದರು.
ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಕೋರ್ಟಿಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.












Click it and Unblock the Notifications