ಬಿಜೆಪಿ ಸೇರಿ 2 ದಿನಕ್ಕೆ ಮಿಥುನ್ ಚಕ್ರವರ್ತಿಯವರಿಗೆ ವೈ ಪ್ಲಸ್ ಭದ್ರತೆ!
ಕೋಲ್ಕತ್ತಾ, ಮಾರ್ಚ್.10: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ Y-Plus ಭದ್ರತೆಯನ್ನು ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು ವೈ ಪ್ಲಸ್ ಭದ್ರತೆಯನ್ನು ನೀಡುವ ಬಗ್ಗೆ ತಿಳಿಸಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಸಿಬ್ಬಂದಿಯು ಮಿಥುನ್ ಚಕ್ರವರ್ತಿ ಅವರಿಗೆ ವೈ ಪ್ಲಸ್ ಭದ್ರತೆಯನ್ನು ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ, ವೈ-ಪ್ಲಸ್ ಭದ್ರತೆಯಲ್ಲಿ 11 ಕಮಾಂಡೋಗಳು, ಮತ್ತು 55ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ತಂಡವನ್ನು ವಿಐಪಿ ಮನೆಯಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗುತ್ತದೆ.
ಕಳೆದ ಮಾರ್ಚ್.07ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಮಿಥುನ್ ಚಕ್ರವರ್ತಿ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಪಶ್ಚಿಮ ಬಂಗಾಳದಲ್ಲಿ 60 ನಾಯಕರಿಗೆ ಭದ್ರತೆ:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿಯ ಭದ್ರತೆಯನ್ನು ಪಡೆದುಕೊಂಡಿರುವ ನಾಯಕರಲ್ಲಿ ಮಿಥುನ್ ಚಕ್ರವರ್ತಿ ಮೊದಲಿಗರೇನಲ್ಲ. ಕಳೆದ ಒಂದು ತಿಂಗಳಿನಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯದ 60ಕ್ಕೂ ಹೆಚ್ಚು ನಾಯಕರಿಗೆ ಎಕ್ಸ್ ಪ್ಲಸ್ ಮತ್ತು ವೈ ಪ್ಲಸ್ ಭದ್ರತೆಯನ್ನು ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ:
ಕಳೆದ ಫೆಬ್ರವರಿ.26ರಂದು ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿತು. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಮೇ.02ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications