ಪಶ್ಚಿಮ ಬಂಗಾಳದಲ್ಲಿ ದೀದಿಗೆ 'ಪ್ರಜಾಪ್ರಭುತ್ವದ ಕಪಾಳಮೋಕ್ಷ!'
ಕೋಲ್ಕತ್ತಾ, ಮೇ 23: ಲೋಕಸಭೆ ಚುನಾವಣೆಯ ಫಲಿತಾಂಶದ ಬಹುಪಾಲು ಚಿತ್ರಣ ಈಗಾಗಲೇ ಲಭ್ಯವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರಿಗೆ ತೀವ್ರ ಮುಖಭಂಗವನ್ನುಂಟು ಮಾಡಲು ಬಿಜೆಪಿ ಸಜ್ಜಾಗಿದೆ.
2014 ರಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 15 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ಖಾತ್ರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ನೀಡಬೇಕು ಎಂದಿದ್ದ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಪಶ್ಚಿಮ ಬಂಗಾಳದ ಜನರೇ 'ಪ್ರಜಾಪ್ರಭುತ್ವದ ಕಪಾಳಮೋಕ್ಷ' ನೀಡಿದ್ದಾರೆ.
ಪಶ್ಚಿಮ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುಂದಿದ್ದರೆ, ಬಿಜೆಪಿ 18 ಕ್ಷೇತ್ರಗಳಲ್ಲಿ ಮುಂದಿದೆ.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬಿದ್ದಿದೆ.
ಪ್ರಧಾನಿ ನರೇಂದ್ರ ಮೊದಿ ಅವರ ವಿರುದ್ಧ ನಿರಂತರ ವಾಗ್ದಾಳಿ, ಅಸಭ್ಯ ಮಾತುಗಳು, ಬಿಜೆಪಿ ನಾಯಕರ ಪ್ರಚಾರ ಸಭೆಗೆ ಅಡ್ಡಿ ಉಂಟು ಮಾಡಿದ ನಡೆ, ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದ ಎಡಪಕ್ಷಗಳ ನಡೆಯಿಂದಾಗಿ ಟಿಎಂಸಿ ಭದ್ರಕೋಟೆಯಲ್ಲಿ ಕೇಸರಿ ಧ್ವಜ ಹಾರಾಡುವಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಹೆಜ್ಜೆ ಇಟ್ಟು, ಪ್ರಧಾನಿ ಹುದ್ದೆಗೇ ಕಣ್ಣಿಟ್ಟಿದ್ದ ಮಮತಾ ಬ್ಯಾನರ್ಜಿ ಅವರಿಗೀಗ, ಪಶ್ಚಿಮ ಬಂಗಾಳ ರಾಜ್ಯದಲ್ಲಾದರೂ ಅಧಿಕಾರ ಉಳಿಸಿಕೊಳ್ಳುವುದು ಸವಾಲು ಎಂಬಂತಾಗಿದೆ.












Click it and Unblock the Notifications