ಜೆಎನ್‌ಯು ವಿದ್ಯಾರ್ಥಿ ನಾಯಕಿ ಐಷ್ ಘೋಷ್ ಸಿಪಿಎಂ ಅಭ್ಯರ್ಥಿ
ಕೋಲ್ಕತಾ, ಮಾರ್ಚ್ 12: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಷ್ ಘೋಷ್, ಈ ತಿಂಗಳು ಆರಂಭವಾಗಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ (ಎಂ) ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮೊದಲ ಹಾಲಿ ಅಧ್ಯಕ್ಷೆ ಎನಿಸಿಕೊಂಡಿದ್ದಾರೆ.
ಜಮೂರಿಯಾ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಐಷ್ ಘೋಷ್ ಅವರಿಗೆ ಸಿಪಿಎಂ ಟಿಕೆಟ್ ನೀಡಿದೆ. ಅವರಿಗೆ ಸಂಯುಕ್ತ ಮೋರ್ಚಾ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.
'ಸಿಪಿಎಂನ ಅಭ್ಯರ್ಥಿಯಾಗಿ ಜಮೂರಿಯಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ. ನನಗೆ ಸಂಯುಕ್ತ ಮೋರ್ಚಾ ಬೆಂಬಲ ನೀಡಿದ್ದು, ನೆಮ್ಮಲ್ಲರ ಬೆಂಬಲ ನೀಡುವಂತೆ ಮನವಿ ಮಾಡುತ್ತೇನೆ' ಎಂದು ಐಷ್ ಘೋಷ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ದೆಹಲಿಯ ಜೆಎನ್‌ಯು ಆವರಣದಲ್ಲಿ ನಡೆದ ಹಿಂಸಾಚಾರದ ವೇಳೆ ಐಷ್ ಘೋಷ್ ತಲೆಗೆ ಪೆಟ್ಟಾಗಿತ್ತು. ಮುಸುಕುಧಾರಿ ವ್ಯಕ್ತಿಗಳು ಕ್ಯಾಂಪಸ್ ಒಳಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ಕಬ್ಬಿಣದ ರಾಡು, ಬಡಿಗೆಗಳು, ಗಾಜಿನ ಬಾಟಲಿಗಳಿಂದ ಹಲ್ಲೆ ನಡೆಸಿದ್ದರು. ಆಗ ತೀವ್ರ ಗಾಯಗೊಂಡಿದ್ದ ಐಷ್ ಘೋಷ್ ಚಿತ್ರ ವೈರಲ್ ಆಗಿತ್ತು. ಬಳಿಕ ಅವರು ಬ್ಯಾಂಡೇಜ್ ಸುತ್ತಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜೆಎನ್‌ಯುದ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್, 2019ರ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷದ ಅಭ್ಯರ್ಥಿಯಾಗಿ ಬಿಹಾರದ ಬೇಗುಸರೈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎದುರು ಭಾರಿ ಅಂತರದಿಂದ ಸೋಲು ಕಂಡಿದ್ದರು.












Click it and Unblock the Notifications