ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಆತ್ಮಹತ್ಯೆ; ವ್ಯಕ್ತಿ ವಶಕ್ಕೆ
ಕೋಲ್ಕತ್ತಾ, ಜುಲೈ 14 : ಪಶ್ಚಿಮ ಬಂಗಾಳ ಪೊಲೀಸರು ಬಿಜೆಪಿ ಶಾಸಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ದೇಬೇಂದ್ರನಾಥ ರಾಯ್ ಆತ್ಮಹತ್ಯೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ದೇಬೇಂದ್ರನಾಥ ರಾಯ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್‌ನಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ರಾಜ್ಯದ ಸಿಐಡಿ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜುಲೈ 13ರ ಸೋಮವಾರ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್ ಅವರ ಶವ ಪತ್ತೆಯಾಗಿತ್ತು. ಹುಟ್ಟೂರಿನಲ್ಲಿರುವ ಮಾರುಕಟ್ಟೆಯ ಕಟ್ಟಡವೊಂದರ ಎದುರು ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು.

ಹೆಮ್ಟಾಬಾದ್ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ರಾಜ್ಯದಲ್ಲಿ ಭಾರಿ ಚರ್ಚೆ ಆರಂಭವಾಗಿತ್ತು. ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.
ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸ್ವರೂಪ ಪಡೆದಿತ್ತು. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಮುಂದುವರೆದ ದಾಳಿ ಇದಾಗಿದೆ ಎಂದು ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಮೊದಲು ಸಿಪಿಐಎಂ ಪಕ್ಷದಿಂದ ಹೆಮ್ಟಾಬಾದ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ದೇಬೇಂದ್ರನಾಥ ರಾಯ್ 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಬಿಜೆಪಿ ಟಿಕೆಟ್ ಮೂಲಕ ಪುನಃ ಚುನಾವಣೆಗೆ ನಿಂತು ಜಯಗಳಿಸಿದ್ದರು.












Click it and Unblock the Notifications