ಪಶ್ಚಿಮ ಬಂಗಾಳ ಪ್ರತಿಷ್ಠಾ ಕಣದಲ್ಲಿ ಬಿಜೆಪಿಯಿಂದ "ಸೂಪರ್ 22" ತಂತ್ರ
ಕೋಲ್ಕತ್ತಾ, ಮಾರ್ಚ್ 11: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಪ್ರತಿಷ್ಠೆಯ ಕಣದಲ್ಲಿ ಗೆಲ್ಲಲೇಬೇಕೆಂಬ ಹಟದೊಂದಿಗೆ ಬಿಜೆಪಿ ಹಲವು ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಮೊದಲ ಎರಡು ಹಂತಗಳ ಚುನಾವಣೆಗೆ 22 ಮುಖಂಡರನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ.
ಚುನಾವಣೆಯಲ್ಲಿ ಗೆಲುವಿಗೆ ತಳಮಟ್ಟದಿಂದ ಕಾರ್ಯನಿರ್ವಹಿಸಲು ಈ "ಸೂಪರ್ 22" ನಾಯಕರನ್ನು ನಿಯೋಜಿಸಿರುವುದಾಗಿ ಬಿಜೆಪಿ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಜನರ ಮತವನ್ನು ಬಿಜೆಪಿಯೆಡೆಗೆ ಸೆಳೆಯುವ ಹೊಣೆಯನ್ನು ಈ 22 ನಾಯಕರಿಗೆ ವಹಿಸಿದ್ದು, ಈಗಾಗಲೇ ಇರುವ ತಂಡದೊಂದಿಗೆ ಈ ನಾಯಕರು ಸೇರಿ ಕಾರ್ಯನಿರ್ವಹಿಸಲಿರುವರು ಎಂದು ಮೂಲಗಳು ತಿಳಿಸಿವೆ.

ನಿತಿನ್ ನವೀನ್, ಅರವಿಂದ ಲಿಂಬಾವಳಿ, ರಾಧಾ ಮೋಹನ್ ಸಿಂಗ್, ಪ್ರವೇಶ್ ವರ್ಮಾ, ರಮೇಶ್ ಬಿದುರಿ, ವಿನೋದ್ ತಾವ್ಡೆ, ಶಂಕರ್ ಚೌಧರಿ, ವಿನಯ್ ಸಹಸ್ತ್ರಬುದ್ಧೆ, ನಿಶಿಕಾಂತ್ ದುಬೇ, ಮಂಗಳ್ ಪಾಂಡೆ, ಪ್ರದೀಪ್ ಸಿಂಗ್ ವಗೇಲಾ ಸೇರಿದಂತೆ ಈ 22 ನಾಯಕರನ್ನು ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಚರ್ಚಿಸಿದ್ದಾರೆ.
ಏಳು ಕೇಂದ್ರ ಸಚಿವರ ತಂಡದೊಂದಿಗೆ, ಕೇಂದ್ರ ಸಚಿವರಾದ ಧರ್ಮ ಪ್ರಧಾನ್ ಹಾಗೂ ಆರ್.ಕೆ ಸಿಂಗ್ ಅವರೂ ರಾಜ್ಯದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾಗಿರಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಚುನಾವಣೆ ಆರಂಭವಾಗಲಿದ್ದು, ಎಂಟು ಹಂತಗಳಲ್ಲಿ 294 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಎರಡು ಹಂತಗಳ ಚುನಾವಣೆಗೆ ಬಿಜೆಪಿ ಈಗಾಗಲೇ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.












Click it and Unblock the Notifications