ಮತ ಹಾಕದ ಜನರನ್ನು ಮುಂದೆ ನೋಡಿಕೊಳ್ಳುತ್ತೇವೆ; ಟಿಎಂಸಿ ಶಾಸಕನ ಬೆದರಿಕೆ
ಕೋಲ್ಕತ್ತಾ, ಮಾರ್ಚ್ 5: ಟಿಎಂಸಿ ಶಾಸಕರೊಬ್ಬರು ಮತದಾರರನ್ನು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಿಯೋಗ ಶುಕ್ರವಾರ ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯಲ್ಲಿ ದೂರು ನೀಡಿದೆ.
ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಮಾರ್ಚ್ 2ರಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಸಂದರ್ಭ, "ನಮಗೆ ಮತ ನೀಡದ ಅಪ್ರಾಮಾಣಿಕ ಜನರನ್ನು, ನಮಗೆ ಮತ ಹಾಕದೆ ಮೋಸ ಮಾಡುವ ಜನರನ್ನು ಚುನಾವಣಾ ಫಲಿತಾಂಶದ ನಂತರ ಭೇಟಿಯಾಗಬೇಕು. ಅಂಥ ಜನರೊಂದಿಗೆ ಆಟ ಆರಂಭಿಸುತ್ತೇವೆ" ಎಂದು ಹೇಳಿದ್ದರು.
ಸುಳ್ಳುಗಾರರು ತುಂಬಿರುವ ಪಕ್ಷ ಎಂದು ಬಿಜೆಪಿಯನ್ನು ಕರೆದಿರುವ ಅವರು, "ಎಡಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಪ್ರಯೋಜನಕ್ಕೆ ಬರುವುದಿಲ್ಲ. ಬಂಗಾಳದಲ್ಲಿನ ಪ್ರತಿ ಮನೆಯನ್ನೂ ಮಮತಾ ಬ್ಯಾನರ್ಜಿ ಅವರ ಅಭಿವೃದ್ಧಿ ಯೋಜನೆಯಡಿಯಲ್ಲಿ ತರಲಾಗುತ್ತದೆ. ಈಗ ದೀದಿಗೆ ಮೋಸ ಮಾಡಿದವರನ್ನು ಚುನಾವಣೆ ನಂತರ ಭೇಟಿ ಮಾಡಲಾಗುತ್ತದೆ" ಎಂದು ಬೆದರಿಕೆಯ ರೀತಿ ಮಾತನಾಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಅಮಿತ್ ಮಾಳವಿಯಾ, "ಟಿಎಂಸಿ ಶಾಸಕ ಹಮೀದುಲ್ ರೆಹಮಾನ್ ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದಾರೆ. ಟಿಎಂಸಿಗೆ ಮತ ಹಾಕದಿದ್ದರೆ ದ್ವೇಷ ತೀರಿಸಿಕೊಳ್ಳುವಂತೆ ಮಾತನಾಡಿದ್ದಾರೆ" ಎಂದು ದೂರಿದ್ದಾರೆ.
ಈ ಕುರಿತು ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ನಾಯಕರಾದ ಭೂಪೇಂದರ್ ಯಾದವ್, ಓಂ ಪಾಠಕ್, ಶಿಶಿರ ಭಜೋರಿಯಾ ಹಾಗೂ ಇನ್ನಿತರರು ಈ ನಿಯೋಗದಲ್ಲಿದ್ದಾರೆ.
ಮಾರ್ಚ್ 27ರಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.












Click it and Unblock the Notifications