ಕಾರ್ ಬಾಗಿಲು ತಾಗಿ ಮಮತಾ ಕಾಲಿಗೆ ಗಾಯ: ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ವರದಿ
ಕೋಲ್ಕತಾ, ಮಾರ್ಚ್ 13: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಉಂಟಾಗಿರುವ ಗಾಯವು ಕಾರಿನ ಬಾಗಿಲು ತಾಗಿರುವ ಕಾರಣದಿಂದ ಆಗಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಇದರಿಂದ ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಳಪನ್ ಬಂಡೋಪಾಧ್ಯಾಯ ಅವರು ಈ ಘಟನೆ ಕುರಿತು ಶುಕ್ರವಾರ ಸಂಜೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳ ಈ ವರದಿ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕಾರ್ ಬಾಗಿಲು ತಾಗಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಬಾಗಿಲು ಹೇಗೆ ಅವರ ಕಾಲಿಗೆ ತಾಕಿದೆ ಎಂಬ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ವಿವರಿಸಿಲ್ಲ ಎನ್ನಲಾಗಿದೆ. ತೃಣಮೂಲ ಕಾಂಗ್ರೆಸ್ ಆರೋಪಿಸಿರುವಂತೆ ಯಾರಾದರೂ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಾರ್ ಬಾಗಿಲನ್ನು ದೂಡಿ ಮಮತಾ ಕಾಲಿಗೆ ಏಟಾಗುವಂತೆ ಮಾಡಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.

ಕಬ್ಬಿಣದ ಕಂಬ ಸಮೀಪದಲ್ಲೇ ಇತ್ತು
ಮಾರ್ಚ್ 10ರಂದು ಈ ಘಟನೆ ನಡೆದ ಸಂದರ್ಭದಲ್ಲಿ ನಂದಿಗ್ರಾಮದ ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಮತಾ ಬ್ಯಾನರ್ಜಿ ಅವರ ಕಾರು ಇದ್ದ ಜಾಗದಿಂದ ಕಬ್ಬಿಣದ ಕಂಬ ತುಂಬಾ ದೂರದಲ್ಲಿ ಇರಲಿಲ್ಲ ಎಂದು ತಿಳಿಸಿದೆ. ಆದರೆ ಕಬ್ಬಿಣದ ಕಂಬಕ್ಕೆ ಬಾಗಿಲು ತಾಗಿ ಅದು ಮುಚ್ಚಿದ್ದರಿಂದ ಮಮತಾ ಕಾಲಿಗೆ ಏಟಾಗಿದೆಯೇ ಎಂಬುದನ್ನು ಹೇಳಿಲ್ಲ.

ಮಮತಾ ಬಿಡುಗಡೆ
ಮಮತಾ ಬ್ಯಾನರ್ಜಿ ಅವರು ಎರಡು ದಿನಗಳ ಆಸ್ಪತ್ರೆ ವಾಸದ ಬಳಿಕ ಕೋಲ್ಕತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ಶುಕ್ರವಾರ ಸಂಜೆ ಬಿಡುಗಡೆ ಹೊಂದಿದರು. ವೈದ್ಯರ ಸಲಹೆಯಂತೆ ಅವರು ತಮ್ಮ ಮನೆಗೆ ಮರಳಿದರು. ಮುಂದಿನ ವಾರ ವೈದ್ಯಕೀಯ ತಪಾಸಣೆ ನಡೆಸುವವರೆಗೂ ಅನಗತ್ಯ ಓಡಾಟ ಮಾಡದಂತೆ ಅವರಿಗೆ ಸಲಹೆ ನೀಡಲಾಗಿದೆ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಅವರು ಭಾಗವಹಿಸುವುದು ಕಷ್ಟವಾಗಲಿದೆ. ಗಾಲಿ ಕುರ್ಚಿಯಲ್ಲಿಯೇ ಅವರು ಪ್ರಚಾರ ಕಾರ್ಯ ನಡೆಸುವ ಸಾಧ್ಯತೆ ಇದೆ.

ಪ್ರತ್ಯಕ್ಷದರ್ಶಿಗಳು ನೀಡಿದ್ದ ಹೇಳಿಕೆ
ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು, ಮಮತಾ ಅವರ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಕಾರಿನ ಮುಂದೆ ಅಳವಡಿಸಿದ್ದ ಬೋರ್ಡಿಂಗ್ ಬಿದ್ದು, ಕಾರ್ ಬಾಗಿಲಿಗೆ ತಾಗಿದೆ. ಬಾಗಿಲು ತೆರೆದುಕೊಂಡಿದ್ದರಿಂದ ಅದು ಏಕಾಏಕಿ ಮುಚ್ಚಿ ಮಮತಾ ಕಾಲಿಗೆ ಗಾಯವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದಿರುವ ಟಿಎಂಸಿ, ಪ್ರತ್ಯಕ್ಷದರ್ಶಿಗಳೆಂದು ಹೇಳಿಕೊಂಡವರು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕಡೆಯವರು ಎಂದು ಆರೋಪಿಸಿದೆ.

ಬಿಜೆಪಿ ನಿಯೋಗ ಭೇಟಿ
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಸಂಸದ ಭೂಪಿಂದರ್ ಯಾದವ್ ನೇತೃತ್ವದ ನಿಯೋಗ, ದೆಹಲಿಯ ಚುನಾವಣಾ ಆಯೋಗದ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದೆ. ಇಡೀ ಘಟನೆಯ ವಿಡಿಯೋವನ್ನು ಆಯೋಗಕ್ಕೆ ನೀಡಿದ್ದು, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಕೋರಿದ್ದೇವೆ. ಇದು ಸುಖಾಸುಮ್ಮನೆ ಹುಯಿಲೆಬ್ಬಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications