9 ಪ್ರಧಾನಿ ಅಭ್ಯರ್ಥಿಗಳ ಮಹಾಘಟಬಂಧನ ದುರಾಸೆಯ ಪ್ರತಿರೂಪ: ಶಾ ಕಿಡಿ!
ಕೋಲ್ಕತ್ತಾ, ಜನವರಿ 23: 'ಒಂಬತ್ತು ಪ್ರಧಾನಿ ಅಭ್ಯರ್ಥಿಗಳನ್ನು ಹೊಂದಿರುವ ಮಹಾಘಟಬಂಧನ ದುರಾಸೆ ಮತ್ತು ಅಧಿಕಾರ ದಾಹದ ಪ್ರತಿರೂಪ' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಮಲಾಡ್ ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, ಕಳೆದ ವಾರ ನಡೆದ ಮಹಾಘಟಬಂಧನ ಸಮಾವೇಶವನ್ನು ಅಣಕಿಸಿದರು.
ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ಪ್ರಚಾರ ಆರಂಭಿಸಿರುವ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ರಣಕಹಳೆ ಮೊಳಗಿಸಿದರು. ಬಿಜೆಪಿಯಲ್ಲಿ ಒಬ್ಬರೇ ಪ್ರಧಾನಿ ಅಭ್ಯರ್ಥಿ ಇರುವುದು. ಆದರೆ ಮಹಾಘಟಬಂಧನದಲ್ಲಿ ಒಂಬತ್ತಕ್ಕೂ ಹೆಚ್ಚು ಜನ ಪ್ರಧಾನಿ ಅಭ್ಯರ್ಥಿಗಳಿದ್ದಾರೆ ಎಂದು ಶಾ ಅಣಕಿಸಿದರು.

9 ಪ್ರಧಾನಿ ಅಭ್ಯರ್ಥಿಗಳು!
"ಕೋಲ್ಕತ್ತಾದ ಬ್ರಿಗೆಡ್ ಪರೇಡ್ ಮೈದಾನದಲ್ಲಿ ಜ.21 ರಂದು ನಡೆದ ವಿಪಕ್ಷಗಳ ಬೃಹತ್ ಸಮಾವೇಶದಲ್ಲಿ ಸುಮಾರು 20-25 ನಾಯಕರು ಭಾಗವಹಿಸಿದ್ದರು. ಅವರಲ್ಲಿ 9 ಜನ ಪ್ರಧಾನಿ ಅಭ್ಯರ್ಥಿಗಳು. ಆದರೆ ಬಿಜೆಪಿಗೆ ನರೇಂದ್ರ ಮೋದಿ ಒಬ್ಬರೇ ಪ್ರಧಾನಿ ಅಭ್ಯರ್ಥಿ"- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ದುರಾಸೆಯ ಪ್ರತಿರೂಪ
ಮಹಾಘಟಬಂಧನವು ದುರಾಸೆ ಮತ್ತು ಅಧಿಕಾರ ದಾಹದ ಪ್ರತೀಕ. ಅವರು ಮೋದಿಯವರನ್ನು ಅಧಿಕಾರದಿಂದ ನಿರ್ಮೂಲನೆ ಮಾಡುವ ಯೋಚನೆಯಲ್ಲಿದ್ದಾರೆ. ನಾವು ಬಡತನ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಯೋಚನೆಯಲ್ಲಿದ್ದೇವೆ- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಯಾವ ಸರ್ಕಾರಬೇಕು?
"ಮಹಾಘಟಬಂಧನದ ನಾಯಕರಿಗೆ ಮಜ್ಬೂರ್ ಸರ್ಕಾರ(ಅಸಹಾಯಕ ಸರ್ಕಾರ) ಬೇಕಾಗಿದೆ. ನಮಗೆ ಮಜ್ಬೂತ್ ಸರ್ಕಾರ(ಬಲಶಾಲಿ ಸರ್ಕಾರ) ಬೇಕಾಗಿದೆ. ಅದರಿಂದ ನಾವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬಹುದು. ಜನರಿಗೆ ಮಜ್ಬೂತ್ ಸರ್ಕಾರ ಬೇಕೆ ಅಥವಾ ಮಜ್ಬೂರ್ ಸರ್ಕಾರ ಬೇಕೆ ಎಂಬ ಆಯ್ಕೆ ಜನರಿಗೇ ಬಿಟ್ಟಿದ್ದು"-ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ನೂರುಕೋಟಿ ಜನ ಮೋದಿ ಜೊತೆಗಿದ್ದಾರೆ!
ಒಂದೇ ವೇದಿಕೆಯ ಮೇಲೆ 20-25 ಜನರನ್ನು ಕರೆತಂದ ಮಾತ್ರಕ್ಕೆ ಗುರಿ ತಲುಪಿದಂತಲ್ಲ. ಇದರಿಂದ ಜನರು ನರೇಂದ್ರ ಮೊದಿ ಅವರನ್ನೇ ಪ್ರಧಾನಿಯನ್ನಾಗಿ ಪುನರಾಯ್ಕೆ ಮಾಡುತ್ತಾರೆ. ಈ ದೇಶದ ನೂರು ಕೋಟಿ ಜನ ಮೋದಿಯವರೊಂದಿಗಿದ್ದಾರೆ-ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಮಹಾಘಟಬಂಧನದಲ್ಲಿ ಒಂದೇ ಮಾತರಂ ಸದ್ದಿಲ್ಲ!
ಮಹಾಘಟಬಂಧನದ ಸಮಾವೇಶದಲ್ಲಿ ಒಮ್ಮೆಯೂ ವಂದೇ ಮಾತರಂ ಅಥವಾ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೇಳಲಿಲ್ಲ. ಆದರೆ ಮೋದಿ ಮೋದಿ ಎಂಬ ಜಪ ಮಾತ್ರ ಕೇಳುತ್ತಿತ್ತು! ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಕೇವಲ ನುಸುಳುಕೋರರಿಗಾಗಿ ಕೆಲಸ ಮಾಡುತ್ತಿದೆ, ಜನರ ಹಿತಾಸಕ್ತಿಗೆ ಇಲ್ಲಿ ಬೆಲೆ ಇಲ್ಲ-ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ












Click it and Unblock the Notifications