ಚುನಾವಣೆ ಕೆಲ ದಿನಗಳಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಓವೈಸಿಗೆ ಹಿನ್ನಡೆ
ಕೋಲ್ಕತ್ತಾ, ಮಾರ್ಚ್ 19: ಚುನಾವಣೆ ಇನ್ನು ಕೆಲ ದಿನಗಳಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿಗೆ ಭಾರೀ ಹಿನ್ನಡೆಯಾಗಿದೆ. ಶುಕ್ರವಾರ ಎಐಎಂಐಎಂ ಪಶ್ಚಿಮ ಬಂಗಾಳ ಮುಖ್ಯಸ್ಥ ಜಮಿರುಲ್ ಹಸನ್ ಪಕ್ಷ ತೊರೆದಿದ್ದು, ಓವೈಸಿಗೆ ಹಿನ್ನಡೆಯಾಗಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ನಂದಿಗ್ರಾಮದಲ್ಲಿ ಬೆಂಬಲ ನೀಡಲು ಹಸನ್ ಇಂಡಿಯನ್ ನ್ಯಾಷನಲ್ ಲೀಗ್ ಸೇರುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಈ ಮುನ್ನ ಓವೈಸಿಯಿಂದ ನಿರ್ಲಕ್ಷ್ಯಕ್ಕೊಳಗಾಗಿರುವುದಾಗಿ ಹಸನ್ ಅಸಮಾಧಾನ ವ್ಯಕ್ತಪಡಿಸಿದ್ದರು. "2015ರಲ್ಲಿ ಎಐಎಂಐಎಂಗೆ ಸೇರ್ಪಡೆಯಾದೆ. ಇಪ್ಪತ್ತು ಜಿಲ್ಲೆಗಳಲ್ಲಿ ಎಐಎಂಐಎಂ ನೆಲೆಯೂರಲು ಶ್ರಮ ಪಟ್ಟೆ. ಮಮತಾ ಬ್ಯಾನರ್ಜಿಯವರು ಕೂಡ ಎಐಎಂಐಎಂ ಗುರಿಯಾಗಿಸಿಕೊಂಡು ಪಕ್ಷದ ಕೆಲವರು ಬಂಧನಕ್ಕೊಳಗಾಗಿದ್ದರು. ಹೀಗಿದ್ದೂ, ನಮ್ಮ ಬಗ್ಗೆ ಓವೈಸಿ ಒಂದೂ ಮಾತನಾಡಿಲ್ಲ. ಏನಾಯಿತು ಕೇಳಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.

ಜೊತೆಗೆ ಟಿಎಂಸಿಯಿಂದ ರಾಜ್ಯಸಭಾ ಸ್ಥಾನ ಪ್ರಸ್ತಾವ ಬಂದಿದ್ದರೂ ಅದನ್ನು ನಿರಾಕರಿಸಿದ್ದೆ ಎಂದು ಹೇಳಿಕೊಂಡಿದ್ದರು. ಇದೀಗ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಪಕ್ಷ ತೊರೆದಿದ್ದಾರೆ.
ಮಾರ್ಚ್ 27ರಂದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಆರಂಭವಾಗಲಿದ್ದು, ಎಂಟು ಹಂತಗಳಲ್ಲಿ 294 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications