ಹೊರಲಾಗದ ಸಾಲ, ಮುದ್ದು ಮಗಳ ಕೊಲೆ, ಅಪಹರಣದ ಕಥೆ: ಇದು ಟೆಕ್ಕಿಯೊಬ್ಬರ ಜೀವನ
ಕೋಲಾರ, ನ.25: ತನ್ನ ಎರಡೂವರೆ ವರ್ಷದ ಮಗಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೆ, ಅಪಹರಣದ ಕಥೆ ಕಟ್ಟಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಹತ್ತು ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ನವೆಂಬರ್ 15 ರಂದು ತನ್ನ ಎರಡೂವರೆ ವರ್ಷದ ಮಗಳನ್ನು ಶಾಲೆಗೆ ಬಿಡುವುದಾಗಿ ಮನೆಯಿಂದ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದರು. ಬಳಿಕ ನವೆಂಬರ್ 16 ರಂದು ಕೋಲಾರ ಬಳಿಯ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು.
ಅಂದಿನಿಂದ ಮೃತ ಕಂದಮ್ಮನ ತಂದೆ ರಾಹುಲ್ ಪರ್ಮಾರ್‌ಗಾಗಿ ಹುಡುಕಾಟ ನಡೆದಿತ್ತು. ಈಗ ಬೆಂಗಳೂರು ಕೆಎಸ್‌ಆರ್‌ಸಿಟಿ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪರಾರಿಯಾಗಿದ್ದ ಆರೋಪಿಯು ದೆಹಲಿಯಲ್ಲಿ ರೈಲು ಹತ್ತಿ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದಾಗ ಪೊಲೀಸರು ಬುಧವಾರ ಆತನನ್ನು ತಡೆದು ಬಂಧಿಸಿದ್ದಾರೆ.

ಮಗುವನ್ನು ಉಸಿರುಗಟ್ಟಿ ಕೊಂದಿರುವ ತಂದೆ
ನವೆಂಬರ್ 16 ರಂದು ಕೋಲಾರ ಜಿಲ್ಲೆಯ ಕೆರೆಯಲ್ಲಿ ಜಿಯಾ ಪರ್ಮಾರ್ ಎಂದು ಗುರುತಿಸಲಾದ ಎರಡೂವರೆ ವರ್ಷದ ಮಗುವಿನ ಶವ ಪತ್ತೆಯಾಗಿತ್ತು. ತಂದೆಯ ಪತ್ತೆಗಾಗಿ ಹುಡುಕಾಟ ನಡೆದಿತ್ತು. ಅಂದಿನಿಂದ ಪೊಲೀಸರು ಆರೋಪಿಯ ಎಲ್ಲಾ ಚಲನವಲನಗಳನ್ನು ಗಮನಿಸುತ್ತಿದ್ದರು.
ಆರೋಪಿ ತಂದೆ ಮಗುವನ್ನು ಕೊಂದು ನಾಲ್ಕು ರಾಜ್ಯಗಳನ್ನು ಸುತ್ತಿದ್ದಾನೆ ಎಂಬ ಮಾಹಿತಿ ಬಂದಿದೆ. ಬಂಗಾರಪೇಟೆಯಿಂದ ತಮಿಳುನಾಡಿನ ವೆಲ್ಲೂರಿಗೆ, ನಂತರ ಆಂಧ್ರಪ್ರದೇಶ, ಆಗ್ರಾ ಮತ್ತು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿ.ಡಿ.ದೇವರಾಜ್ ತಿಳಿಸಿದ್ದಾರೆ.
ಕೊಲೆ ಮಾಡಿರುವುದಾಗಿ ಆರೋಪಿ ರಾಹುಲ್ ಪರ್ಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮಗುವಿನ ಜೊತೆಗೆ ಕೆರೆಗೆ ಹಾಕಿ ಆತ್ಮಹತ್ಯೆಗೆ ಪ್ರಯತ್ನ
"ಮಗುವನ್ನು ತನ್ನ ಎದೆಗೆ ಒತ್ತಿ ಉಸಿರುಗಟ್ಟಿಸಿ ಕೊಂದಿದ್ದೇನೆ ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ. ನಂತರ ಮಗುವಿನೊಂದಿಗೆ ಕೆರೆಯಲ್ಲಿ ಮುಳುಗಲು ಯತ್ನಿಸಿದ್ದಾರೆ. ಆದರೆ, ಕೆರೆಯಲ್ಲಿ ನೀರು ಆಳವಿಲ್ಲದ ಕಾರಣ ಬದುಕುಳಿದಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಶವವನ್ನು ಅಲ್ಲೆ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ನಾಲ್ಕಾರು ರಾಜ್ಯಗಳನ್ನು ಸುತ್ತಿದ್ದಾರೆ. ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆಡ.
ನವೆಂಬರ್ 15 ರಂದು ಮಗಳನ್ನು ಪ್ರಿಸ್ಕೂಲ್‌ಗೆ ಬಿಡುವುದಾಗಿ ಹೇಳಿ ಹೋಗಿದ್ದ ಪತಿ ಮನೆಗೆ ಬರದ ಹಿನ್ನೆಲೆ ಶಾಲೆಗೆ ತೆರಳಿದ ಪತ್ನಿಗೆ ಮಗು ಶಾಲೆಗೆ ಬರದಿರುವುದು ತಿಳಿದಿತ್ತು. ಬಳಿಕ ಆಕೆ ಕಾನೆಯಾಗಿರುವ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೆಚ್ಚಾದ ಸಾಲದ ಹೊರೆ, ಆತ್ಮಹತ್ಯೆಗೆ ನಿರ್ಧಾರ
ಆರು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ ಆರೋಪಿ ಕನಿಷ್ಠ ಐದಾರು ಕಡೆ ಸಾಲ ಮಾಡಿ ಸಾಲ ಮಾಡಿ ಮಗಳ ಹತ್ಯೆಗೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಆರೋಪಿಯು ಐದು ಸ್ಥಳಗಳಲ್ಲಿ ಸಾಲ ಮಾಡಿದ್ದರು. ಜೊತೆಗೆ ಹಲವು ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಂಡಿದ್ದು, ಮೂರು ತಿಂಗಳಿನಿಂದ ಮನೆ ಬಾಡಿಗೆ ಪಾವತಿಸಿಲ್ಲ' ಎಂದು ದೇವರಾಜ್ ತಿಳಿಸಿದ್ದಾರೆ.
"ಆರೋಪಿಯು ದುಂದುವೆಚ್ಚದ ಜೀವನಶೈಲಿಯನ್ನು ಹೊಂದಿದ್ದು, ಆವರ ಸಂಬಳ ತಿಂಗಳಿಗೆ ಸುಮಾರು 25,000 ಸಾವಿರ. ತಾನು ಎಂಜಿನಿಯರ್ ಎಂದು ಎಲ್ಲರಿಗೂ ಹೇಳುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಜೀವನಶೈಲಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ' ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಮಗುವನ್ನು ಅತೀಯಾಗಿ ಪ್ರೀತಿಸಿ, ತಾನೇ ಕೊಂದ ತಂದೆ
ಈ ಹಿಂದೆ ರಾಹುಲ್ ಪರ್ಮಾರ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳುವಾಗಿದೆ ಎಂದು ಪ್ರಕರಣ ದಾಖಲಿಸಿದ್ದು, ವಿಚಾರಣೆಗಾಗಿ ಅವರನ್ನು ಕರೆಸಲಾಗಿತ್ತು ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ. ಆದರೆ, ರಾಹುಲ್ ಅವರೇ ಗಿರವಿ ಅಂಗಡಿಯಲ್ಲಿ ಆಭರಣಗಳನ್ನು ಅಡವಿಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಆರೋಪಿಯು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಚಿನ್ನವನ್ನು ಅಡವಿಟ್ಟಿದ್ದರು. ಮಗುವಿನೊಂದಿಗೆ ಕಣ್ಮರೆಯಾದ ದಿನ ಕೂಡ, ಬ್ಯಾಂಕ್ ಒಂದರಿಂದ ರಿಕವರಿ ಏಜೆಂಟ್‌ಗಳು ಅವನಿಗೆ ಕರೆ ಮಾಡಿದ್ದರು. ಅಡಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡ ಅವರನ್ನು ಠಾಣೆಗೆ ಕರೆಸಿದ್ದರು' ಎಂದು ದೇವರಾಜ್ ತಿಳಿಸಿದರು.
ತನಿಖೆಯ ಸಮಯದಲ್ಲಿ, ರಾಹುಲ್ ಪರ್ಮಾರ್ ತನ್ನ ಹೆಂಡತಿ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ತಾನು ಸತ್ತ ನಂತರ ಮಗಳು ಕಷ್ಟ ಪಡುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
"ಅವರು ತಾನು ಆತ್ಮಹತ್ಯೆ ಮಾಡಿಕೊಂಡು ಸತ್ತರೆ, ಮುಂದೆ ಮಗುವಿಗೆ ತೊಂದರೆಯಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಮಗುವನ್ನು ಕೊಲ್ಲಲು ಬೇರೆ ಯಾವುದೇ ಕಾರಣಗಳಿಲ್ಲದ ಕಾರಣ ಇದು ನಿಜವೆಂದು ತೋರುತ್ತದೆ. ಮನೆ ಮತ್ತು ಮಗುವನ್ನು ನೋಡಿಕೊಳ್ಳುವುದು ಅವರೇ. ಪ್ರತಿದಿನ ಮಗುವಿಗೆ ಸ್ನಾನ ಮಾಡಿಸಿ, ಊಟ ತಿನ್ನಿಸಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು" ಎಂದು ದೇವರಾಜ್ ಹೇಳಿದ್ದಾರೆ.
ಆರೋಪಿ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications