ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ; ರೈತರಿಂದ ಪ್ರತಿಭಟನೆ
ಕೋಲಾರ, ಜನವರಿ 29: ಕೋಲಾರ ಜಿಲ್ಲೆಯಾದ್ಯಂತ ಬಿಎಸ್ಎನ್ಎಲ್ ಮೊಬೈಲ್ ನೆಟ್ ವರ್ಕ್ ಹಾಗೂ ಬ್ರಾಡ್ ಬ್ಯಾಂಡ್‌ಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲಾ ರೈತ ಸಂಘದವರು ಈ ಕುರಿತು ಪ್ರತಿಭಟನೆ ನಡೆಸಿದರು.
ಶುಕ್ರವಾರ ಕೋಲಾರದ ಬಿಎಸ್ಎನ್ಎಲ್ ಕಚೇರಿಯ ಮುಂಭಾಗ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯಲ್ಲಿ ಬಿಎಸ್ಎನ್ಎನ್ ನೆಟ್ ವರ್ಕ್ ಗ್ರಾಹಕರು ಒಂದಿಲ್ಲೊಂದು ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಪಕ್ಕದಲ್ಲೇ ಇದ್ದು ಕರೆ ಮಾಡಿದರೆ ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಅಂತ ಬರುತ್ತಿದೆ. ಕರೆಸ್ಸಿ ಹಾಕಿಸಿಕೊಂಡಿದ್ದು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಲಾಯಿತು.

ರೈತರು ಕೇಂದ್ರ ಸರ್ಕಾರ ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು. ಇದೇ ವೇಳೆ ಅಧಿಕಾರಿಯೊಬ್ಬರು ರೈತ ಸಂಘದ ಸದಸ್ಯರನ್ನು ಏಕವಚನದಲ್ಲಿ ಮಾತಾಡಿಸಿದ್ದು, ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನಾನಿರತ ರೈತರು, "ಏಯ್ ಹುಷಾರು ನಾವು ಇಲ್ಲೇ ಬಟ್ಟೆ ಬಿಚ್ಚಿ ಕುಳಿತು ಪ್ರತಿಭಟನೆ ಮಾಡಬೇಕಾಗುತ್ತದೆ. ಕೂಡಲೇ ಕ್ಷಮೆ ಕೇಳು ಎಂದು ಕೂಗಾಡಿದರು".
ಪ್ರತಿಭಟನಾನಿರತ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.












Click it and Unblock the Notifications