ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಶ್ರೀನಿವಾಸ್ ಹತ್ಯೆ!
ಕೋಲಾರ ಅಕ್ಟೋಬರ್ 23: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎದೆ, ತಲೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಆಗಿದ್ದಾರೆ.
ಎಂ ಶ್ರೀನಿವಾಸ್ ಅವರು ಕೋಲಾರ ಜಿಲ್ಲಾ ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿದ್ದು, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಶ್ರೀನಿವಾಸ ಮೇಲೆ ಹಲ್ಲೆ ನಡೆದಿದೆ.

ಕೋಲಾರ ಹೊಗಳಗೆರೆಯ ತೋಟದ ಮನೆಯಲ್ಲಿ ಕಾಮಗಾರಿ ವೀಕ್ಷಿಸುತ್ತಿದ್ದಾಗ ಬಂದ ಆರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಶ್ರೀನಿವಾಸ್ ಅವರ ಮೇಲೆ ದಾಳಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಣೆ ಮಾಡಿದರು.
ಶ್ರೀನಿವಾಸ್ ಅವರು ತೋಟದಲ್ಲಿ ಕಾಮಗಾರಿ ವೀಕ್ಷಿಸುತ್ತಿದ್ದಾಗ ಬೆಳಿಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿ ನಡೆಸಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಬಗ್ಗೆ ಪ್ರತ್ಯಕ್ಷದರ್ಶಿ ಅಮರ್ ಸುದ್ದಿಗಾರರಿಗೆ ಮಾತನಾಡಿ, 'ಎರಡು ಬೈಕ್‌ನಲ್ಲಿ ಆರು ಜನ ನಾವಿರುವ ಸ್ಥಳಕ್ಕೆ ಬಂದರು. ಅಂಕಲ್ ಚೆನ್ನಾಗಿದ್ದೀರಾ ಎಂದು ಶ್ರೀನಿವಾಸ್ ಅವರಿಗೆ ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಏಕಾಏಕಿ ದಾಳಿ ಮಾಡಿದರು. ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದರು. ನಮ್ಮ ಮೇಲೂ ಅವರು ದಾಳಿಗೆ ಮುಂದಾದರು. ಆದರೆ ನಾವು ಅವರಿಂದ ತಪ್ಪಿಸಿಕೊಂಡೆವು. ಹಲವಾರು ಬಾರಿ ಈ ದುಷ್ಕರ್ಮಿಗಳನ್ನು ನಮ್ಮ ಊರಲ್ಲಿ ಓಡಾಡುವುದನ್ನು ನಾನು ನೋಡಿದ್ದೇನೆ' ಎಂದು ಅಮರ್ ಹೇಳಿದರು.












Click it and Unblock the Notifications