ಶ್ರೀನಿವಾಸಪುರ ಜನರ ಪಾಲಿನ 70 ಎಂ.ಎಂ. ಸಿನೆಮಾ ಹೀರೋ ರಮೇಶ್ ಕುಮಾರ್
'ಡೈಲಾಗ್ ಕೊಟ್ಟು ಗುರು'.
ಇದು ಕಳೆದ ಒಂದು ವಾರದಿಂದ ಶ್ರೀನಿವಾಸಪುರದ ಅಂಗಡಿ, ಹೋಟೆಲ್‌ಗಳ ಮುಂದೆ ಗುಂಪು ಗೂಡಿದ ಜನರ ನಡುವೆ ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.
'ಅಸೆಂಬ್ಲಿಲೋ ಸ್ವಾಮಿ 70 ಎಂ.ಎಂ. ಸಿನಿಮಾಲೋ ಹೀರೋ ಮಾದಿರಿ ಕನಿಪಿಸ್ತಾಡ್ ರಾ (ಅಸೆಂಬ್ಲಿಯಲ್ಲಿ ಸ್ವಾಮಿ 70 ಎಂ.ಎಂ. ಸಿನೆಮಾದ ಹೀರೋನಂತೆ ಕಾಣಿಸುತ್ತಾನೆ), ಆಯನೆಕ್ಕಡುನ್ನಾ ಬೊಬ್ಬಿಲಿ ಪುಲೇರಾ (ಆತ ಎಲ್ಲಿದ್ದರೂ ಹೆಬ್ಬುಲಿಯೇ), ಸ್ವಾಮಿ ಒಕ ಡೈಲಾಗ್ ಕೊಟ್ಟಿತೇ ಅಸೆಂಬ್ಲಿ ನಡುಗೇಯಲ್ಸಿಂದೇ... (ಸ್ವಾಮಿ ಒಂದು ಡೈಲಾಗ್ ಹೊಡೆದರೆ ಅಸೆಂಬ್ಲಿ ನಡುಗಬೇಕಾದ್ದೆ) ಇಂತಹ ಮಾತಗಳು ಕೂಡ ಅಲ್ಲೀಗ ಸಾಮಾನ್ಯವಾಗಿವೆ.
ಅಂದಹಾಗೆ, ಸ್ಪೀಕರ್ ರಮೇಶ್ ಕುಮಾರ್ ತವರು ಕ್ಷೇತ್ರ ಶ್ರೀನಿವಾಸಪುರ. ಕಳೆದ ಒಂದು ವಾರದಿಂದ ಕರ್ನಾಟಕ ವಿಧಾನಸಭೆಯ ಕಲಾಪಗಳ ಅಧ್ಯಕ್ಷೀಯ ಸ್ಥಾನದಲ್ಲಿ ಕುಳಿತುಕೊಂಡಿರುವ ಅವರು ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಸಹಜವಾಗಿಯೇ ಸ್ವಕ್ಷೇತ್ರದ ಜನರ ಹೊಸ ಭಾವನೆಗಳಿಗೆ ಕಾರಣರಾಗಿದ್ದಾರೆ.

ಬ್ರಾಹ್ಮಣ ಸಮುದಾಯದವರು ಎರಡು ಪರ್ಸೆಂಟಿಗೂ ಕಡಿಮೆ ಇರುವ ಕ್ಷೇತ್ರದಲ್ಲಿ ಆದೇ ಸಮುದಾಯದವರಾದ ರಮೇಶ್ ಕುಮಾರ್ ಗೆಲುವು- ಸೋಲುಗಳ ನಡುವೆ ತಮ್ಮ ರಾಜಕೀಯ ಮುತ್ಸದ್ದಿತನದಿಂದಲೇ ಗೆದ್ದು ಬರುತ್ತಿರುವವರು. ತೀರಾ ಅಜಾತ ಶತ್ರು ತರಹದ ವ್ಯಕ್ತಿತ್ವ ಅವರದ್ದಲ್ಲವಾದರೂ ಇವತ್ತು ಅವರ ಸುತ್ತ ಶ್ರೀನಿವಾಸಪುರದಲ್ಲಿ ಎದ್ದಿರುವ ಪ್ರಭೆಯನ್ನು ಕಂಡು ವಿರೋಧಿಗಳೂ ದಂಗಾಗಬೇಕಿದೆ.
ರಾಜಕಾರಣದಲ್ಲಿ ಭಿನ್ನ ಹಾದಿ:
ರಮೇಶ್ ಕುಮಾರ್ ರಾಜಕಾರಣದ ಮಾದರಿಯೇ ಕೊಂಚ ಭಿನ್ನ ಅಂತ ಅಲ್ಲಿನ ಜನರಿಗೆ ಅನ್ನಿಸಲು ಸಾಕಷ್ಟು ನಿದರ್ಶನಗಳೂ ಇವೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಆರ್. ಜಿ. ನಾರಾಯಣರೆಡ್ಡಿ ಕಾಂಗ್ರೆಸ್ ನಿಂದ ರಮೇಶ್ ಕುಮಾರರಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದರು. ರಮೇಶ್ ಕುಮಾರ್ ರಾಯಲಪಾಡಿನಲ್ಲಿದ್ದ ನಾರಾಯಣರೆಡ್ಡಿಯವರ ಮನೆಗೇ ಹೋಗಿ, ಅವರ ಪತ್ನಿಗೆ ಕೈ ಮುಗಿದು, ತಮಗೆ ಓಟು ಹಾಕುವಂತೆ ಮನವಿ ಮಾಡಿದ್ದರು.
ಗಡಿನಾಡ ರಾಜಕಾರಣದಲ್ಲಿ ಇಂತಹದೊಂದು ನಡೆ ಜನರನ್ನು ತಬ್ಬಿಬ್ಬುಗೊಳಿಸಿತ್ತು. ತಮಗೆ ವಿರೋಧಿಯೇ ಯಾವುದಾದರೂ ಕೆಲಸ ಮಾಡಿಸಿಕೊಳ್ಳಲು ಬಂದರೆ ಮೊದಲಿಗೆ ಅವರನ್ನು ಮಾತಾಡಿಸಿ ಕಳುಹಿಸುವುದು ರಮೇಶ್ ಕುಮಾರ್ ಅವರ ತಂತ್ರಗಾರಿಕೆಗಳಲ್ಲೊಂದು. ಇದಕ್ಕಾಗಿಯೇ 'ಸ್ವಾಮಿ ವಲೇಸ್ಯಾಸಾಡ್ರ'(ಸ್ವಾಮಿ ಬಲೆ ಹಾಕಿಬಿಟ್ನೋ) ಎಂದು ಜನ ಮಾತನಾಡಿಕೊಳ್ಳುತ್ತಾರೆ.

2018ರಲ್ಲಿನ ಗೆಲುವಿಗೆ ಕ್ಷೇತ್ರದಲ್ಲಾದ ಕೆಲಸಗಳ ಜೊತೆಗೆ ವಿರೋಧಿಗಳಿಗೂ ಎಸೆದ 'ಬಲೆ'ಯೂ ಕಾರಣ ಎಂಬುದು ಸ್ಥಳೀಯ ಮಟ್ಟದಲ್ಲಿ ಜನರ ವಿಮರ್ಶೆ.
ಬಾಲ್ಯದಲ್ಲೇ ತುಂಟ:
ಬಾಲ್ಯದಲ್ಲಿ ತಾನು ಅತ್ಯಂತ ತುಂಟನಾಗಿದ್ದೆನೆಂದು ಖುದ್ದು ರಮೇಶ್ ಕುಮಾರ್ ಅವರೇ ಹೇಳಿಕೊಳ್ಳುತ್ತಾರೆ. ತಂದೆ ರಾಮಪ್ಪನವರು 'ವೀಡು ಇಕ್ಕಡುಂಟೇ ಚೆಡಿಪೋತಾಡು'(ಇವನಿಲ್ಲಿದ್ದರೆ ಕೆಟ್ಟು ಹೋಗುತ್ತಾನೆ) ಎಂದು ಗೌನಿಪಲ್ಲಿಯಲ್ಲಿದ್ದ ಆಪ್ತ ಬಂಧುವಿನ ಮನೆಯಲ್ಲಿ ಬಿಟ್ಟಿದ್ದರು. ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಗೆ 1960ರಲ್ಲಿ ದಾಖಲಾತಿ ಮಾಡಿಸಿದರು.
ನಂತರ ಬೆಂಗಳೂರಿನ ಗ್ಯಾಸ್ ಕಾಲೇಜಿಗೆ ಕಾಲಿಟ್ಟರು ರಮೇಶ್ ಕುಮಾರ್. ಅಲ್ಲಿ ಬಿ.ಎಸ್ ಸಿ., ಓದಿದ ಅವರು 'ಎಕ್ಸ್ಪೋ-70' ವಿಚಾರದಲ್ಲಿ ನಡೆದ ವಿದ್ಯಾರ್ಥಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.
'ಸ್ವಾಮಿ ಏಮಿ ಚೇಸಿನಾ ಒಗರ್ಥ ಮುಂಟುಂದಿರಾ' (ಸ್ವಾಮಿ ಏನು ಮಾಡಿದರೂ ಒಂದು ಅರ್ಥವಿರುತ್ತೆ) ಅನ್ನುವಷ್ಟು ಪ್ರಭಾವ ಬೆಳೆಸಿಕೊಂಡಿರುವ ರಮೇಶ್ ಕುಮಾರ್ ಸುಲಭವಾಗಿ ಅರ್ಥವಾಗುವ ವ್ಯಕ್ತಿತ್ವ ಅಲ್ಲ. ಕಾಲದ ಗುಣವನ್ನು ಚೆನ್ನಾಗಿ ಬಲ್ಲ ಇವರು ಕಾಲವನ್ನೇ ತಮ್ಮ ರಾಜಕೀಯ ಜೀವನಕ್ಕೆ ಬಳಸಿಕೊಳ್ಳುವ ಚಾಣಕ್ಯತನವನ್ನು ಮೈಗೂಡಿಸಿಕೊಂಡಿದ್ದಾರೆ.
ಬುದ್ಧಿವಂತರೆಂದು ಅಂದುಕೊಳ್ಳುವ ಅಧಿಕಾರಿಗಳನ್ನು ಅವರ ಬುದ್ಧಿವಂತಿಕೆಯ ನೆರಳಿನಲ್ಲೇ ಕೆಲಸಗಳಿಗೆ ಒಗ್ಗಿಸುವ, ಬಗ್ಗಿಸುವ ಜಾಣ್ಮೆ ಇವರಿಗೆ ಕರಗತವಾಗಿದೆ. ಇವರ ಹಿಂದೆ ತಾವೇ ಹೀರೋಗಳೆಂದು ಬೀಗುವ ಅನೇಕ ಫೋಜು ನಾಯಕರು ಇವರ ಹಿಂದೆ ಬೆಕ್ಕಿನ ಮರಿಗಳಂತೆ ಓಡಾಡುವುದನ್ನು ನೋಡಬಹುದು.
ಕಾರಣ ಇಂಥವರು ಇವರಿಂದ ರಾಜಕೀಯ, ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳದೆ ಇವರ 'ಹೆಸರಿ'ನ ಲಾಭಕೋರರಾಗಿರುವುದು ರಮೇಶ್ ಕುಮಾರರ ಬೇಸರಕ್ಕೆ ಕಾರಣವಾಗಿದ್ದರೆ, ತನಗೆ ತಕ್ಕ ವಾರಸುದಾರಿಕೆಯ ಸಾಮರ್ಥ್ಯವಿಲ್ಲದವರಿಂದಾಗಿ ನಿರಾಸೆ ಇರುವುದು ಅವರ ಮಾತುಗಳಲ್ಲಿ ಇರುವುದು ಸುಳ್ಳಲ್ಲ. ಒಂದು ರೀತಿಯ ಒಂಟಿ ಸಲಗ ಅವರು.

ರಾಜಕೀಯ ಅಧಿಕಾರ ಶಾಶ್ವತವೇ?:
ಒಳ್ಳೆಯ ಕೆಲಸಗಳಿಗಾಗಿ ಯಾರು ಬೇಕಾದರೂ ನನ್ನನ್ನು ಬಳಸಿಕೊಳ್ಳಬಹುದು ಎಂಬುದು ಕ್ಷೇತ್ರದ ಜನರಿಗೆ ಅವರ 'ಓಪನ್ ಆಫರ್.'
'ನೇನೇ ಶಾಶ್ವತಂ ಕಾದು, ಇಂಕ ರಾಜಕೀಯ ಅಧಿಕಾರಂ ಶಾಶ್ವತಮಾ?' (ನಾನೇ ಶಾಶ್ವತವಲ್ಲ. ಇನ್ನು ರಾಜಕೀಯ ಅಧಿಕಾರ ಶಾಶ್ವತವೆ?) ಎಂಬ ಭಾವನೆಯ ಸಂತನೊಬ್ಬ ಅವರಲ್ಲಿ ಆಗೀಗ ಕಾಣಿಸಿಕೊಳ್ಳುತ್ತಾನೆ.
ತನ್ನ ಮೇಲಿರುವ ಕ್ಷೇತ್ರದ ಜನರ 'ಋಣ'ದ ಬಗ್ಗೆ ಪದೇ ಪದೇ ಪ್ರಸ್ತಾಪಿಸುವ ರಮೇಶ್ ಕುಮಾರ್, ಅದನ್ನು ತೀರಿಸಿದ ಮರು ಕ್ಷಣ ಸಾರ್ವಜನಿಕ ಜೀವನದಿಂದ ಮುಕ್ತಿ ಪಡೆಯವ ಮಾತನಾಡುತ್ತಾರೆ. ಪಕ್ಷಾತೀತವಾಗಿ ಕ್ಷೇತ್ರದ ಬಡ ಜನರಿಗೆ ಗಟ್ಟಿ ಸೂರು ಸಿಗುವಂತೆ ಮಾಡುವ ಕನಸು ಸಾಕಷ್ಟು ನನಸಾಗಿದೆ ಎಂಬುದು ಅವರ ವಿಶ್ವಾಸ.
ರಮೇಶ್ ಕುಮಾರ್ ಅವರವರ ಭಾವಕ್ಕೆ ತಕ್ಕಂತೆ ವ್ಯಾಖ್ಯಾನಿಸಬಹುದಾದ ವ್ಯಕ್ತಿತ್ವದ ಮನುಷ್ಯ ಎಂಬುದಂತೂ ನಿಜ. ಈತ ನಾಸ್ತಿಕನೋ, ಆಸ್ತಿಕನೋ ಇತ್ಯರ್ಥವಂತೂ ಇಂದಿಗೆ ಅಸಾಧ್ಯ. ರಾಜಕೀಯವಾಗಿ ಟೀಕೆ, ಅಭಿಪ್ರಾಯಗಳೇನೇ ಇದ್ದರೂ ರಮೇಶ್ ಕುಮಾರ್ ಕರ್ನಾಟಕ ರಾಜಕಾರಣದ ಅಗತ್ಯವಂತೂ ಹೌದು.

ಪತ್ನಿ ವಿಜಯಮ್ಮ, ಮಗ ಹರ್ಷವರ್ಧನ:
ರಮೇಶ್ ಕುಮಾರ್ ತಮ್ಮ ಕುಟುಂಬದವರ ಜತೆಗೆ ಹೊರಗೆ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ಪತ್ನಿ ವಿಜಯಲಕ್ಷ್ಮಿ (ವಿಜಯಮ್ಮ), ಮಗ ಹರ್ಷವರ್ಧನರ ಬಗ್ಗೆ ಶ್ರೀನಿವಾಸಪುರ ಕ್ಷೇತ್ರದ ಹೊರಗೆ ಅಷ್ಟಾಗಿ ಗೊತ್ತಿಲ್ಲ. ಹರ್ಷವರ್ಧನ ಅವರಿಗೆ ಕೂಡ ಅಪ್ಪನ ರಾಜಕಾರಣವನ್ನು ಮುಂದುವರಿಸುವ ಆಸಕ್ತಿ ಇದ್ದಂತಿಲ್ಲ. ಇಡೀ ಕುಟುಂಬಕ್ಕೆ ರಮೇಶ್ ಕುಮಾರ್ ರ ಆರೋಗ್ಯವೇ ಸದಾ ಚಿಂತೆಯ ವಿಷಯ.
ಹಾಗಂತ ರಮೇಶ್ ಕುಮಾರ್ ಗೆ ತೀರಾ ಅನಾರೋಗ್ಯ ಇದೆ ಎಂದಲ್ಲ. ಎಲ್ಲಿ ರಾಜಕೀಯದ ಮಧ್ಯೆ ತಮ್ಮ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾರೋ ಎಂಬ ಚಿಂತೆ ಅದು.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications