ಸಿದ್ದಾಪುರ: ಕೆರೆ ಬೇಟೆಗೆ ಬಂದು ಮೀನು ಸಿಗದಿದ್ದಕ್ಕೆ ಆಕ್ರೋಶ
ಕಾರವಾರ, ಮೇ 29: ದೇವಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥವಾಗಿ ಕೆರೆಯಲ್ಲಿನ ಮೀನು ಹಿಡಿಯುವುದಕ್ಕಾಗಿ ದೇವಸ್ಥಾನ ಕಮಿಟಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು.
ಮೀನು ಬೇಟೆಗಾಗಿ ಆಗಮಿಸಿದ್ದ ಸಾವಿರಾರು ಮಂದಿ ಕೆರೆಗೆ ಇಳಿದಿದ್ರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದ ಜನರು ಮೀನು ಬೇಟೆ ಆಯೋಜನೆ ಮಾಡಿದ ಸಮಿತಿ ವಿರುದ್ಧವೇ ಆಕ್ರೋಶಗೊಂಡು ಗಲಾಟೆ ನಡೆಸಿದ್ದು, ಪೆಂಡಾಲ್ ಸೇರಿದಂತೆ ಸಿಕ್ಕ ವಸ್ತುಗಳನ್ನೆಲ್ಲ ಹೊತ್ತೊಯ್ದಿದ್ದಾರೆ.
ಸಮಿತಿ ಸದಸ್ಯರ ವಿರುದ್ಧ ಜನರ ಆಕ್ರೋಶ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮದಲ್ಲಿ ಈಶ್ವರ ದೇವಸ್ಥಾನ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಕೆರೆ ಮೀನು ಬೇಟೆ ಅಂತಾ ಆಯೋಜನೆ ಮಾಡಿತ್ತು. ಮೀನು ಬೇಟೆ ಆಯೋಜನೆ ಮಾಡಿರೋ ಬಗ್ಗೆ ಸಾಕಷ್ಟು ಪ್ರಚಾರವನ್ನು ಸಹ ಕೊಡಲಾಗಿತ್ತು. ಹೀಗಾಗಿ ಕೇವಲ ಸಿದ್ದಾಪುರ ತಾಲೂಕಿನಿಂದಷ್ಟೆ ಅಲ್ಲದೆ ಪಕ್ಕದ ಶಿವಮೊಗ್ಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಕರೆ ಮೀನುಬೇಟೆಗಾಗಿ ಆಗಮಿಸಿದ್ರು.

ಈ ಹಿಂದೆ ಪ್ರತಿ ವರ್ಷ ಕೂಡ ಕೆರೆ ಮೀನು ಬೇಟೆ ಆಯೋಜನೆ ಮಾಡಲಾಗಿತ್ತು. ಆದ್ರೆ ಕಳೆದ ಎರಡು ಮೂರು ವರ್ಷದಿಂದ ಕೊರೋನಾ ಇರೋ ಕಾರಣಕ್ಕೆ ಈ ಕೆರೆ ಮೀನು ಬೇಟೆ ಮಾಡಿರಲಿಲ್ಲ. ಹೀಗಾಗಿ ಅನೇಕ ವರ್ಷಗಳ ನಂತರದಲ್ಲಿ ಮೀನು ಬೇಟೆ ಮಾಡಿರೋ ಕಾರಣಕ್ಕೆ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಆದರೆ ಕೆರೆಯಲ್ಲಿ ಮೀನು ಇಲ್ಲದ ಕಾರಣ ಜನರು ಸಮಿತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೀನು ಗಲಾಟೆಗೆ ಸುಖಾಂತ್ಯ
ಮೀನು ಬೇಟೆಗಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಮಿತಿ ಪ್ರತಿ ಕುಣಿಕೆಗೆ 600 ರೂಪಾಯಿ ಹಣ ಪಡೆದುಕೊಳ್ಳಲಾಗಿತ್ತು. ಅದರಂತೆ 3000 ಸಾವಿರ ಜನರು 600ರೂಪಾಯಿ ಹಣ ನೀಡಿ ಪ್ರವೇಶ ಪಡೆದು ಕೆರೆಯಲ್ಲಿ ಮೀನು ಬೇಟೆಗೆ ಇಳಿದಿದ್ದರು.
ಆದರೆ ಕೆರೆಗೆ ಇಳಿದ ಬಹುತೇಕರಿಗೆ ಒಂದೇ ಒಂದು ಮೀನು ಸಿಕ್ಕಿರಲಿಲ್ಲ ಇದರಿಂದ ಆಕ್ರೋಶಕ್ಕೊಳಗಾದ ಮತ್ಸ್ಯ ಪ್ರಿಯರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಸಂಘಟಕರ ವಿರುದ್ದ ಆಕ್ರೋಶಗೊಂಡು ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಶಾಮಿಯಾನವನ್ನು ಕಿತ್ತರಲ್ಲದೆ, ಸೌಂಡ್ ಬಾಕ್ಸ್, ಸ್ಪೀಕರ್, ಸೇರಿದಂತೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಸಮಿತಿ ಸದಸ್ಯರ ಮೇಲೂ ಹಲ್ಲೆ ನಡೆಸಿದ್ದು ಸ್ಥಳಕ್ಕೆ ಆಗಮಿಸಿ ಪೊಲೀಸರ ಮೇಲೆ ಸಹ ಜನರು ಆಕ್ರೋಶ ಹೊರಹಾಕಿ ಹಲ್ಲೆ ಮಾಡಿದ್ದಾರೆ. ಒಟ್ಟಾರೆ ಸಿದ್ದಾಪುರ ತಾಲೂಕಿನ ಕಾನಗೋಡದಲ್ಲಿ ಆಯೋಜನೆ ಮಾಡಲಾಗಿದ್ದ ಕೆರೆ ಮೀನು ಬೇಟೆ ಗಲಾಟೆ ಕೊನೆಗೂ ಪೊಲೀಸರು ಕಾರ್ಯಕ್ರಮ ಆಯೋಜಕರ ಜೊತೆ ಮಾತುಕತೆ ನಡೆಸಿ ಜನರ ಹಣವನ್ನು ವಾಪಸ್ ಕೊಡಿಸೋ ಮೂಲಕ ಕೆರೆ ಮೀನು ಗಲಾಟೆಗೆ ಸುಖಾಂತ್ಯ ಹಾಡಿದ್ದಾರೆ.












Click it and Unblock the Notifications