ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ-ಸಿದ್ದಾಪುರದಲ್ಲಿ ಮಳೆ: ಜಲಾಶಯಗಳಿಂದ ನೀರು ಬಿಡುಗಡೆ, ಪ್ರವಾಹದ ಭೀತಿಯಲ್ಲಿ ನದಿಪಾತ್ರದ ಜನ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 15: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ತಗ್ಗಿರುವ ಮಳೆ ಮಲೆನಾಡು ಭಾಗಗಳಲ್ಲಿ ಶುಕ್ರವಾರ ಗಾಳಿಯ ಸಹಿತ ಸುರಿಯುತ್ತಿದೆ. ಇದರಿಂದ ಜಲಾಶಯಗಳಿಗೆ ಯಥೇಚ್ಚವಾಗಿ ನೀರು ಹರಿದು ಬಂದು ಜಲಾಶಯಗಳು ಭರ್ತಿಯ ಹಂತಕ್ಕೆ ತಲುಪಿವೆ. ಡ್ಯಾಂಗಳಿಂದ ನೀರು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮತ್ತೆ ಮಳೆ ಅಬ್ಬರಿಸತೊಡಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ವ್ಯಾಪಕವಾಗಿದ್ದು, ಹಳಿಯಾಳ, ಜೋಯಿಡಾ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಜೊತೆಗೆ ಬಿರುಗಾಳಿಯಂತೆ ಗಾಳಿ ಬೀಸುತ್ತಿರುವುದು ಸಾಕಷ್ಟು ಅವಘಡಗಳ ಸೃಷ್ಟಿಗೆ ಕಾರಣವಾಗುತ್ತಿದೆ.

ಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

ಮಾತ್ರವಲ್ಲದೆ ಗಾಳಿ ಸಹಿತ ಮಳೆಗೆ ಕೆಲವೆಡೆ ಮರಗಿಡಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಮನೆ- ಮಳಿಗೆಗಳ ಚಾವಣಿಗಳು ಹಾರಿ ಹೋಗುವ ಆತಂಕ ಎದುರಾಗಿದೆ.

ಸಿದ್ದಾಪುರದ ತಾರೇಸರದ ಹಳ್ಳ ದಾಟುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ತಾರೇಸರದ ಪರಮೇಶ್ವರ ಕೃಷ್ಣಪ್ಪ ಹೆಗಡೆ (62) ಅವರ ಶವ ಪತ್ತೆಯಾಗಿದೆ. ಗುರುವಾರ ಹೆಗ್ಗರಣಿಯಿಂದ ಮನೆಗೆ ತೆರಳುವಾಗ ಹಳ್ಳ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು. ಈ ಬಗ್ಗೆ ಹುಡುಕಾಟ ನಡೆಸಲಾಗಿತ್ತಾದರೂ ಅವರ ಮೃತದೇಹ ಶುಕ್ರವಾರ ತಾರೇಸರ ಹೊಳೆಯಲ್ಲಿ ದೊರೆತಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 400 ಎಕರೆ ಜಲಾವೃತ

ಸುಮಾರು 400 ಎಕರೆ ಜಲಾವೃತ

ಶಿರಸಿ, ಬನವಾಸಿ, ಸಿದ್ದಾಪುರ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಮತ್ತು ಶಿವಮೊಗ್ಗ ಭಾಗದಲ್ಲಿ ಮಳೆ ಮುಂದುವರಿದ ಕಾರಣ ವರದಾ ನದಿ ಉಕ್ಕಿ ಹರಿಯುತ್ತಿದ್ದು ಬನವಾಸಿಯ ಬಾಸಿ ಗ್ರಾಮ ಪಂಚಾಯಿತಿಯ ಮೊಗಳ್ಳಿ ಗ್ರಾಮದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಇದರಿಂದ ಅಡಿಕೆ, ಅನಾನಸ್ ತೋಟ, ಭತ್ತದ ಗದ್ದೆಗಳು‌ ನೀರಿನಲ್ಲಿ ಮುಳುಗಡೆಯಾಗಿವೆ. ಸುಮಾರು 400 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಿದೆ.

ಬೊಮ್ಮನಹಳ್ಳಿ,ಕದ್ರಾ ಜಲಾಶಯಗಳಿಂದ ನೀರು ಬಿಡುಗಡೆ

ಬೊಮ್ಮನಹಳ್ಳಿ,ಕದ್ರಾ ಜಲಾಶಯಗಳಿಂದ ನೀರು ಬಿಡುಗಡೆ

ಇತ್ತ ಮಳೆ ಹೆಚ್ಚಾದ ಕಾರಣ ಜಲಾಶಯಗಳಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಕೂಡ ಏರಿಕೆಯಾಗಿದೆ. ಈಗಾಗಲೇ ದಾಂಡೇಲಿ ತಾಲೂಕಿನ ಅಂಬಿಕಾನಗರದ ಬೊಮ್ಮನಹಳ್ಳಿ, ಕಾರವಾರ ತಾಲೂಕಿನ ಕದ್ರಾ, ಹೊನ್ನಾವರ ವ್ಯಾಪ್ತಿಯ ಗೇರುಸೊಪ್ಪ ಅಣೆಕಟ್ಟೆಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಸದ್ಯ ಅಣೆಕಟ್ಟೆಗಳ ಸುರಕ್ಷತಾ ದೃಷ್ಟಿಯಿಂದ ನಿಗದಿತ ಪ್ರಮಾಣದ ನೀರನ್ನು ಸಂಗ್ರಹಿಸಿ, ಅದಕ್ಕಿಂತ ಹೆಚ್ಚಾದ ನೀರನ್ನು ಹೊರ ಬಿಡಲು ಜಿಲ್ಲಾಡಳಿತ ಜಲಾಶಯಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿದೆ.

ಅದರಂತೆ 438.38 ಮೀ. ಗರಿಷ್ಠ ಮಟ್ಟದ ಬೊಮ್ಮನಹಳ್ಳಿ ಜಲಾಶಯ ಈಗಾಗಲೇ 437.43 ಮೀ.ನಷ್ಟು ಭರ್ತಿಯಾಗಿದ್ದು, 4,353 ಕ್ಯೂಸೆಕ್ಸ್ ನೀರನ್ನ ಹೊರಬಿಡಲಾಗಿದೆ. ಇನ್ನು 34.50 ಮೀ.ನ ಕದ್ರಾ ಜಲಾಶಯದಿಂದ ಇಂದು ಸಂಜೆಯವರೆಗೆ 30.40 ಮೀ.ಗೆ ಭರ್ತಿಯಾಗಿದ್ದು, 37,682 ಕ್ಯೂಸೆಕ್ಸ್ ನೀರಿನ ಒಳಹರಿವು ಪಡೆದಿದೆ. ಹೀಗಾಗಿ ಎಂಟು ಗೇಟುಗಳನ್ನು ತೆರೆದು ಒಟ್ಟು 40,331 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ.

ನದಿಪಾತ್ರದ ಜನರಿಗೆ ಪ್ರವಾಹದ ಭೀತಿ

ನದಿಪಾತ್ರದ ಜನರಿಗೆ ಪ್ರವಾಹದ ಭೀತಿ

ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಸುತ್ತಲಿನ ಭೈರಾ, ಕದ್ರಾ, ಗೊಟೇಗಾಳಿ, ಕೆರವಡಿ, ಸಿದ್ದರ, ಕಿನ್ನರ, ಕುರ್ನಿಪೇಟ್ ಗ್ರಾಮಗಳ ಜನತೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಹವಾಮಾನ ಇಲಾಖೆ ಜುಲೈ 19ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯ ಕುರಿತು ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಇನ್ನಷ್ಟು ಎಚ್ಚರಿಕೆ ವಹಿಸಲು ಸೂಚಿಸಿದೆ.

ಮನೆ, ವಿದ್ಯುತ್‌ ಕಂಬಗಳಿಗೆ ಹಾನಿ

ಮನೆ, ವಿದ್ಯುತ್‌ ಕಂಬಗಳಿಗೆ ಹಾನಿ

ಇನ್ನು ಗಾಳಿ ಸಹಿತ ಭಾರಿ ಮಳೆಗೆ ಹೊನ್ನಾವರ, ಕಾರವಾರ, ಸೇರಿದಂತೆ ಹಲವೆಡೆ ಮರಗಳು ಕಿತ್ತು ಬಿದ್ದಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಇಂದು ಒಂದು ಮನೆ ಸಂಪೂರ್ಣ ಹಾನಿಯಾಗಿದ್ದು 10 ಮನೆಗಳಿಗೆ ಭಾಗಶಃ ಮತ್ತು 54 ಮನೆಗಳು ಸಣ್ಣಪುಟ್ಟ ಹಾನಿಯಾಗಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ತಣ್ಣಗಾಗಿದ್ದ ಮಳೆ ಮಲೆನಾಡು ಭಾಗಗಳಲ್ಲಿ ಅಬ್ಬರಿಸುತ್ತಿದ್ದು, ಒಂದರ ಮೇಲೊಂದರಂತೆ ಅವಘಡಗಳು ಸಂಭವಿಸುತ್ತಿವೆ. ಅಲ್ಲದೇ ಜಲಾಶಯಗಳಿಂದಲೂ ನೀರು ಹೊರ ಬಿಡುತ್ತಿರುವ ಕಾರಣ ನದಿ ಪಾತ್ರದ ಜನರಲ್ಲಿ ಆತಂಕ‌ ಶುರುವಾಗಿದೆ.

English summary
Rain continues in the Malnad Region of Uttara Kannada district. People panic of flood who live in river bank areas after many dams release heavy water into the river,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X