ಕಾಂಗ್ರೆಸ್ ಗ್ಯಾರಂಟಿಗೆ ಕಾದು ಕುಳಿತ ಜನ: ಬಿಪಿಎಲ್ ಕಾರ್ಡ್‌ಗಾಗಿ ಹೆಚ್ಚಿದ ಅಲೆದಾಟ
ಕಾರವಾರ, ಮೇ 23: ಕಾಂಗ್ರೆಸ್ ಚುನಾವಣೆ ಪೂರ್ವ ಘೋಷಣೆ ಮಾಡಿದ ಗ್ಯಾರಂಟಿಗಳಿಗೆ ಜನ ಕಾದು ಕುಳಿತಿದ್ದಾರೆ. ಯೋಜನೆಯ ಲಾಭ ಪಡೆಯಲು ಬಹುತೇಕ ಬಿಪಿಎಲ್ ಕಾರ್ಡ್ ಮಾನದಂಡ ಎನ್ನಲಾಗುತ್ತಿದ್ದು, ಪರಿಣಾಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಗಾಗಿ ಕಚೇರಿಗಳಿಗೆ ಅಲೆಯುವವರ ಸಂಖ್ಯೆ ಹೆಚ್ಚಾಗತೊಡಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ಪೂರ್ವ ಅನ್ನಭಾಗ್ಯ, ಗೃಹಲಕ್ಷ್ಮಿ, 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಗ್ಯಾರಂಟಿ ಘೋಷಣೆ ಮಾಡಿತ್ತು. ಅಲ್ಲದೇ ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಇದೀಗ ಭರ್ಜರಿ ಗೆಲುವಿನೊಂದಿಗೆ ಅಧಿಕಾರಿಕ್ಕೇರಿದೆ.

ಅದರಂತೆ ಇದೀಗ ಜನರ ಚಿತ್ತ ಗ್ಯಾರಂಟಿ ಯೋಜನೆಗಳತ್ತ ಹೊರಳಿದೆ. ಸರ್ಕಾರ ಕೂಡ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆಯಾದರೂ ಜನರಲ್ಲಿನ ಕುತೂಹಲ ಕಡಿಮೆಯಾಗಿಲ್ಲ. ಯೋಜನ ಲಾಭಕ್ಕಾಗಿ ಜನ ಕಾದು ಕುಳಿತಿದ್ದು ಯಾವಾಗ ಯೋಜನೆ ಜಾರಿಯಾಗುವುದೋ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆ ಸಾಗಿರುವ ಜನ ಯೋಜನೆ ಲಾಭ ಪಡೆಯಲು ತಯಾರಿ ನಡೆಸಿದ್ದಾರೆ. ಯೋಜನೆಗಳನ್ನು ಹೇಗೆ ಯಾರಿಗೆ ನೀಡುತ್ತಾರೆ ಎಂಬ ಸ್ಪಷ್ಟತೆ ಇಲ್ಲದೇ ಇದ್ದರೂ ಬಿಪಿಎಲ್ ಕಾರ್ಡ್ ಮಾನದಂಡವಾಗಬಹುದೆಂದು ಬಹುತೇಕರು ನಂಬಿದ್ದಾರೆ. ಇದರಿಂದ ಈಗಾಗಲೇ ಅರ್ಜಿ ಹಾಕಿದವರು ಸೇರಿದಂತೆ ಹೊಸ ಕಾರ್ಡ್ ಪಡೆಯಲು ಜಿಲ್ಲೆಯ ಕೆಲವೆಡೆ ಜನ ತಾಲೂಕು ಕಚೇರಿಗಳಿಗೆ ಮುಗ್ಗಿ ಬೀಳುತ್ತಿದ್ದಾರೆ.
ಹೊಸ ಕಾರ್ಡ್‌ಗೆ ಅರ್ಜಿ ಪಡೆಯುವ ಕರ್ನಾಟಕ ಒನ್ ಹಾಗೂ ಸೈಬರ್ ಸೆಂಟರ್‌ಗೆ ಧಾವಿಸುತಿದ್ದು ನಿತ್ಯವೂ ಅರ್ಜಿ ಸಲ್ಲಿಕೆಗಾಗಿ ವಿಚಾರಣೆ ನಡೆಸತೊಡಗಿದ್ದಾರೆ. ಸರ್ಕಾರ ಕಳೆದ ಕೆಲ ತಿಂಗಳಿಂದ ಹೊಸ ರೇಷನ್ ಕಾರ್ಡ್ ನೀಡುವುದನ್ನು ನಿಲ್ಲಿಸಿದ್ದು ಕೂಡಲೇ ಬಾಕಿ ಇರುವ ಅರ್ಜಿ ವಿಲೆವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರ ರೋಹಿದಾಸ್ ನಾಯ್ಕ ಆಗ್ರಹಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಈವರೆಗೆ 15,170 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರಲ್ಲಿ 14,669 ಅರ್ಜಿಗಳು ವಿಲೇವಾರಿಯಾಗಿದ್ದು 501 ಅರ್ಜಿಗಳು ವಿತ್ ಡ್ರಾ ಮಾಡಿಕೊಂಡಿದ್ದಾರೆ. 12,472 ಅರ್ಜಿಗಳಲ್ಲಿ 5,901 ಅರ್ಜಿಗಳನ್ನು ಊರ್ಜಿತಗೊಳಿಸಲಾಗಿದ್ದು, 1,558 ಅರ್ಜಿಗಳನ್ನ ತಿರಸ್ಕರಿಸಲಾಗಿದೆ. ಇನ್ನು 7,459 ರೇಷನ್ ಕಾರ್ಡಗಳನ್ನು ಪ್ರಸಕ್ತ ಸಾಲಿನಲ್ಲಿ ಅರ್ಜಿದಾರರಿಗೆ ನೀಡಲಾಗಿದೆ. ಆದರೆ ಇನ್ನು 7,210 ಅರ್ಜಿಗಳು ಸರ್ವರ್ ಸಮಸ್ಯೆ ಹಾಗೂ ಇತರೆ ಕಾರಣದಿಂದ ಬಾಕಿ ಉಳಿಸಲಾಗಿದೆ. ಇದರಿಂದ ಅರ್ಜಿ ಸಲ್ಲಿಸಿದವರು ನಿತ್ಯವೂ ರೇಷನ್ ಕಾರ್ಡ್‌ಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಜನ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನಿತ್ಯವೂ ಕರೆ ಮಾಡಿ ಕೇಳುತ್ತಿದ್ದಾರೆ. ಆದರೆ ಸರ್ಕಾರದಿಂದ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಸೂಚನೆ ನೀಡಿಲ್ಲ. ಸರ್ಕಾರ ಸೂಚನೆ ನೀಡಿದ ನಂತರ ಬಿಪಿಎಲ್ ಕಾರ್ಡ ಮಾಡಿಸಲು ಆನ್ ಲೈನ್ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯ ಕೇವಲ ರೇಷನ್ ಕಾರ್ಡ್‌ನಲ್ಲಾದ ತಪ್ಪುಗಳ ತಿದ್ದುಪಡಿಗೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಮಾತ್ರ ಅರ್ಜಿ ಪಡೆಯಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.
ಸದ್ಯ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದರೂ ಯೋಜನೆಗಳ ಅನುಷ್ಠಾನಕ್ಕೆ ರೂಪರೇಷಗಳು ಸಿದ್ದವಾಗಬೇಕಿದೆ. ಆದರೆ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಈವರೆಗೂ ಬಿ.ಪಿ.ಎಲ್ ಕಾರ್ಡ್ ದೊರೆಯದೇ ನಿತ್ಯವೂ ಸರ್ಕಾರಿ ಕಚೇರಿ ಹತ್ತಿಳಿಯುವಂತಾಗಿದೆ. ಅರ್ಜಿ ಹಾಕಿದವರಿಗೆ ಕೂಡಲೇ ಬಿಪಿಎಲ್ ಕಾರ್ಡ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರರ ಆಗ್ರಹವಾಗಿದೆ.












Click it and Unblock the Notifications