Republic Day Tableau 2023 : ನವದೆಹಲಿಯಲ್ಲಿ ಉ.ಕನ್ನಡದ ಹಾಲಕ್ಕಿ ಸುಗ್ಗಿ ಕುಣಿತಕ್ಕೂ ಅವಕಾಶ
ಕಾರವಾರ, ಜನವರಿ, 24: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜೊತೆಗೆ ಇದೇ ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನಕ್ಕೂ ಕೂಡ ಅವಕಾಶ ದೊರೆತಿದೆ.
74ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ರಾಜಪಥದಲ್ಲಿ ನಡೆಯಲಿರುವ ಪರೇಡ್ ಪಥಸಂಚಲನದಲ್ಲಿ ಸಮಾಜ ಸೇವೆಯಲ್ಲಿ ಸಾಧನೆಗೈದ ಮಹಿಳೆಯರ ಟ್ಯಾಬ್ಲೋ ಪ್ರದರ್ಶನ ಇರಲಿದೆ. ವಿದ್ಯಾಭ್ಯಾಸ ಇಲ್ಲದೆ ಇದ್ದರೂ ನಾಡಿಗೆ ಅಪ್ರತಿಮ ಕೊಡುಗೆ ನೀಡಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಪ್ರದರ್ಶನ ಇರಲಿದೆ.
ಕಾರವಾರ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ತೆಗೆದುಕೊಂಡ ಕ್ರಮಗಳಿವು
ಇದರ ಜೊತೆಗೆ ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣತ ಕೂಡ ನಾರಿಶಕ್ತಿ ಟ್ಯಾಬ್ಲೋ ಜೊತೆ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಕಲಾವಿದ ಪುರುಷೋತ್ತಮ ಗೌಡ ಅವರ ನೇತೃತ್ವದಲ್ಲಿ ಸುಮಾರು 25 ಮಂದಿಯ ತಂಡ ದೇಹಲಿಗೆ ತೆರಳಿದೆ. ಅಲ್ಲದೆ ಕಳೆದ ಒಂದು ವಾರದಿಂದ ಅಭ್ಯಾಸದಲ್ಲಿ ತೊಡಗಿಕೊಂಡು ಜನವರಿ 23 ರಂದು ಅಂತಿಮ ಹಂತದ ಅಭ್ಯಾಸದ ಪರೇಡ್ ಕೂಡ ನಡೆಸಿ ಪ್ರದರ್ಶನಕ್ಕೆ ಸಜ್ಜಾಗಿದೆ.

ನಾರಿಶಕ್ತಿ ಟ್ಯಾಬ್ಲೋಗೆ ಅನುಮತಿ
ಪಥಸಂಚಲನದಲ್ಲಿ ನಾರಿಶಕ್ತಿ ಟ್ಯಾಬ್ಲೋಗೆ ಕೊನೇ ಹಂತದಲ್ಲಿ ಅನುಮತಿ ದೊರೆತಿದೆ. ಆದರೂ ಕೂಡ ಖ್ಯಾತ ವಿನ್ಯಾಸಕಾರ ಶಶಿಧರ ಅಡಪ ನೇತೃತ್ವದಲ್ಲಿ ತಂಡ ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ರಚನೆ ಮಾಡಿ ದೇಶದ ಗಮನ ಸೆಳೆಯುತ್ತಿದೆ. ಅದೇ ರೀತಿಯಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತಕ್ಕೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸಂತೋಷವಾಗುತ್ತಿದೆ ಎಂದು ತಂಡದ ನೇತೃತ್ವ ವಹಿಸಿರುವ ಕಲಾವಿದ ಪುರುಷೋತ್ತಮ ಗೌಡ ಹೇಳಿದರು.

ಅಂತಿಮ ಪರೇಡ್‌ಗೆ ಸಜ್ಜು
ತಂಡದಲ್ಲಿ 12 ಹೆಣ್ಣು ಮಕ್ಕಳು ಹಾಗೂ 13 ಮಂದಿ ಪುರುಷರು ಇದ್ದಾರೆ. ಜನವರಿ 16 ರಂದು ದೆಹಲಿಗೆ ಆಗಮಿಸಿ ಕೊರೆಯುವ ಚಳಿ ನಡುವೆಯೂ ನಿರಂತರ ಅಭ್ಯಾಸ ನಡೆಸಿ ಇದೀಗ ಅಂತಿಮ ಪರೇಡ್‌ಗೆ ಸಜ್ಜಾಗಿದ್ದೇವೆ. ಅಲ್ಲದೆ ಈಗಾಗಲೇ ನವದೆಹಲಿಯ ಆರ್ಮಿ ಕ್ಯಾಂಪ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲಿಯೂ ಪಾಲ್ಗೊಂಡು ತಂಡ ಉತ್ತಮ ಪ್ರದರ್ಶನ ನೀಡಿ ಜನರಿಂದ ಮನ್ನಣೆ ಪಡೆದಿದೆ ಎಂದರು.

ಸುಗ್ಗಿ ಕುಣಿತದ ವಿಶೇಷತೆ ಏನು?
ಬುಡಕಟ್ಟು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಪ್ರತಿ ವರ್ಷ ಹೋಳಿ ವೇಳೆ ಸುಗ್ಗಿ ಕುಣಿತ ಇರುತ್ತದೆ. ಜಿಲ್ಲೆಯ ಕರಾವಳಿಯ ತಾಲೂಕುಗಳಲ್ಲಿ ಕಂಡುಬರುವ ಈ ವಿಶಿಷ್ಟ ಸುಗ್ಗಿ ಕುಣಿತದಲ್ಲಿ ಹಾರ, ತುರಾಯಿ, ಕುಂಚ, ಗುಮ್ಮಟೆ ವಾದ್ಯ, ಅವರ ವೇಶ ಭೂಷಣಗಳೇ ಪ್ರಮುಖ ಆಕರ್ಷಣೆಯಾಗಿರಲಿದೆ. ಕೃಷಿಯನ್ನೇ ಮೂಲ ಕಸುಬನ್ನಾಗಿಸಿಕೊಂಡಿರುವ ಹಾಲಕ್ಕಿ ಸಮುದಾಯದವರು, ಕೃಷಿ ಚಟುವಟಿಕೆಗಳು ಮುಗಿದ ಬಳಿಕ ಬರುವ ಹೋಳಿ ವೇಳೆ ಮನೆ ಮನೆಗೆ ತೆರಳಿ ಸುಗ್ಗಿ ಆಡುವ ವಾಡಿಕೆಯಿದೆ. ಇಂತಹ ಕಲೆಯನ್ನು ಕಾರವಾರದ ಅಮದಳ್ಳಿ ಬಂಟದೇವ ಯುವಕರ ಸಂಘವೂ ರಾಜ್ಯದ ನಾನಾ ಭಾಗಗಳಲ್ಲಿ ಪ್ರದರ್ಶಿಸುವ ಮೂಲಕ ಗಮನ ಸಳೆಯುತ್ತಿದೆ.

ಹಲವು ಬಾರಿ ಸುಗ್ಗಿಕುಣಿತದ ಪ್ರದರ್ಶನ
ದೇಹಲಿಯಲ್ಲಿ ಹತ್ತಾರು ಬಾರಿ ಸುಗ್ಗಿಕುಣಿತದ ಪ್ರದರ್ಶನ ನೀಡಿದ್ದೇವು. ಆದರೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಇದೇ ಮೊದಲ ಬಾರಿಗೆ ಅವಕಾಶ ದೊರೆತಿದೆ. ಇದರೊಂದಿಗೆ ನಮ್ಮ ಬಹುದಿನದ ಕನಸು ಈಡೇರಿದ್ದು, ಈಗಾಗಲೇ ಸಾಕಷ್ಟು ಸಿದ್ಧತೆ ನಡೆಸಿ ಅಂತಿಮ ಪರೇಡ್‌ಗೆ ಸಜ್ಜಾಗಿದ್ದೇವೆ. ಎಲ್ಲರೂ ಜನವರಿ 26ರಂದು ಪರೇಡ್ ವೀಕ್ಷಣೆ ಮಾಡುವಂತೆ ಕಲಾವಿದ ಪುರುಷೋತ್ತಮ ಗೌಡ ಮನವಿ ಮಾಡಿದ್ದಾರೆ.