ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಭಟ್ಕಳದ ಮಸೀದಿಗಳಿಗೆ ಬಂತು ಬೆದರಿಕೆ ಪತ್ರ
ಭಟ್ಕಳ, ಜನವರಿ 16: ಬಳ್ಳಾರಿ ಶಾಸಕರ ಹೆಸರಿನಲ್ಲಿ ಪಟ್ಟಣದ ಮೂರು ಮಸೀದಿಗಳ ಮುಖ್ಯಸ್ಥರಿಗೆ ಬೆದರಿಕೆ ಪತ್ರಗಳು ಬಂದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಹೆಸರಿನಲ್ಲಿ ಪತ್ರ ಬಂದಿದ್ದು, ಪತ್ರದ ಒಳಗೆ ಮತ್ತೋರ್ವ ಶಾಸಕ ಆನಂದ್ ಸಿಂಗ್ ಹೆಸರಿನಲ್ಲಿ ಸಹಿಯನ್ನೂ ಹಾಕಲಾಗಿದೆ.
ಪತ್ರದಲ್ಲಿ, "ಅಮಿತ್ ಶಾ ದೇಶದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಸಿ.ಎ.ಎ, ಎನ್‌ಆರ್‌ಸಿ ಕಾಯ್ದೆ ಜಾರಿಗೆ ತಂದಿದ್ದು, ರಾಮ ಮಂದಿರ ನಿರ್ಮಾಣವನ್ನು ಸಹ ಮಾಡಲು ಮುಂದಾಗಿದ್ದಾರೆ. ನಮ್ಮ ದೇಶವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮುಂದಾಗಿರುವುದು ನಮಗೆ ಖುಷಿ ನೀಡಿದೆ. ಮುಸಲ್ಮಾನರು ಇದಕ್ಕೆ ವಿರೋಧ ಮಾಡದೇ ಹಿಂದೂ ಸಂಪ್ರದಾಯ ಅನ್ವಯಿಸಿಕೊಳ್ಳಿ" ಎಂದು ತಿಳಿಸಲಾಗಿದೆ.
ಅಲ್ಲದೇ ಮಸೀದಿಗಳನ್ನು ಕೆಡವಿ ಮುಂದೆ ಮಂದಿರಗಳನ್ನು ನಿರ್ಮಾಣ ಮಾಡಲಿದ್ದೇವೆ. ದೇಶವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡಲಿದ್ದು, ಮುಸಲ್ಮಾನರು ಇದಕ್ಕೆ ಬೆಂಬಲ ಕೊಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಸೀದಿಯ ಮುಖಂಡರು ಹಾಗೂ ತಂಜೀಮ್ ಸಂಸ್ಥೆಯವರು ಭಟ್ಕಳ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ಕೆಲ ಕಿಡಿಗೇಡಿಗಳು ಕೋಮು ಸೌಹಾರ್ದ ಹಾಳುಮಾಡುವ ಉದ್ದೇಶದಿಂದ ಈ ಪತ್ರವನ್ನು ಹಾಕಿರುವಂತೆ ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಪೊಲೀಸರು ದೂರುದಾರರನ್ನು ಕರೆಸಿ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಿದ್ದಾರೆ.
ಇತ್ತೀಚಿಗೆ ಶಾಸಕ ಸೋಮಶೇಖರ್ ರೆಡ್ಡಿ ಬಳ್ಳಾರಿಯಲ್ಲಿ ಎನ್.ಆರ್.ಸಿ ಪರ rally ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ನಡುವೆಯೇ ಅವರ ಹೆಸರಿನಲ್ಲಿ ಮಸೀದಿಗೆ ಪತ್ರ ಬಂದಿದ್ದು, ಶಾಸಕ ಆನಂದ್ ಸಿಂಗ್ ಸಹಿಯನ್ನು ಸಹ ಹಾಕಿರುವುದರಿಂದ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಇಳಿದಿದೆ.












Click it and Unblock the Notifications