ಈಶ್ವರಪ್ಪ ಆಯ್ತು, ಈಗ ಸಚಿವ ಅನಂತಕುಮಾರ ಹೆಗಡೆಗೂ ಕೊಲೆ ಬೆದರಿಕೆ
ಶಿರಸಿ, ಏಪ್ರಿಲ್ 21: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಮತ್ತೆ ಕೊಲೆ ಬೆದರಿಕೆಯ ಕರೆ ಬಂದಿದೆ.
ಈ ಬಗ್ಗೆ ಶಿರಸಿಯ ಪೊಲೀಸ್ ಠಾಣೆಯಲ್ಲಿ ಅನಂತಕುಮಾರ ಹೆಗಡೆ ಅವರ ಆಪ್ತಸಹಾಯಕ ಸುರೇಶ ಶೆಟ್ಟಿ ಪ್ರಕರಣ ದಾಖಲು ಮಾಡಿದ್ದಾರೆ.
ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ, ಉರ್ದುವಿನಲ್ಲಿ ನಿಂದನೆ
ಅನಂತಕುಮಾರ ಹೆಗಡೆಯವರ ನಿವಾಸದ ಸ್ಥಿರ ದೂರವಾಣಿಗೆ ಶುಕ್ರವಾರ ಮಧ್ಯರಾತ್ರಿ ಬಂದಿದ್ದ ಕರೆಯನ್ನು ಅವರ ಪತ್ನಿ ಶ್ರೀರೂಪಾ ಸ್ವೀಕರಿಸಿದ್ದಾರೆ. ಈ ವೇಳೆ ಅವರ ಬಳಿ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ್ದಾರೆನ್ನಲ್ಲಾದ ಅನಾಮಧೇಯ ವ್ಯಕ್ತಿಯೊಬ್ಬ, 'ನಿನ್ನ ಗಂಡ ಎಲ್ಲಿ. ಒಂದು ಬಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಬಿಡುವುದಿಲ್ಲ. ಕೊಂದೇ ಕೊಲ್ಲುತ್ತೇವೆ. ಎಲ್ಲಿ ಅಡಗಿ ಕುಳಿತಿದ್ದಾನೆ. ಭದ್ರತಾ ಸಿಬ್ಬಂದಿಯನ್ನೂ ಬಿಡುವುದಿಲ್ಲ. ಎಷ್ಟು ದಿನ ಪೊಲೀಸ್ ಬೆಂಗಾವಲಲ್ಲಿ ಇರುತ್ತಾನೆ. ಪೊಲೀಸ್ ನಾಯಿಗಳಿಗೆ ಹೆದರುವುದಿಲ್ಲ' ಮುಂತಾಗಿ ಅವಾಚ್ಯವಾಗಿ ಮಾತನಾಡಿದ್ದಾರೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಕೂಡ ಹಲವು ಬಾರಿ ಅನಂತಕುಮಾರ ಹೆಗಡೆ ಅವರ ಮನೆಯ ಸ್ಥಿರ ದೂರವಾಣಿಗೆ ಇದೇ ರೀತಿ ಬೆದರಿಕೆ ಕರೆಗಳು ಬಂದಿದ್ದವು ಎಂದು ದೂರುಗಳನ್ನು ನೀಡಲಾಗಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೂ ಜೀವ ಬೆದರಿಕೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಉರ್ದುವಿನಲ್ಲಿ ನಿಂದನೆ ಮಾಡಿದ್ದನು.












Click it and Unblock the Notifications