Sirsi Marikamba Jatre: ಇಂದಿನಿಂದ ಶಿರಸಿ ಮಾರಿಕಾಂಬಾ ಜಾತ್ರೆ: ಧಾರ್ಮಿಕ ಕಾರ್ಯಕ್ರಮಗಳ ವಿವರ
ಕಾರವಾರ, ಮಾರ್ಚ್ 20: ರಾಜ್ಯದ ಅತಿ ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ನಿನ್ನೆ(ಮಾರ್ಚ್ 19) ಮಂಗಳವಾರದಿಂದಲೇ ಆರಂಭವಾಗಿದ್ದು, ಇಂದು ಶ್ರೀದೇವಿಯ ರಥಾರೋಹಣ, ಶೋಭಾಯಾತ್ರೆ ಹಾಗೂ ಮಧ್ಯಾಹ್ನ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ಸ್ಥಾಪನೆ ನಡೆಯಲಿದೆ.
ಮಂಗಳವಾರ ಗಣಹೋಮದಿಂದ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಜಾತ್ರೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಕಲಶ ಪೂಜಿಸಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಾತ್ರಿ ದೇವಿಯ ಕಲ್ಯಾಣೋತ್ಸವ ವಿಧಿವಿಧಾನಗಳು ನೆರವೇರಿದ್ದು, ದೇವಾಲದ ಧರ್ಮದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತರು ಭಾಗಿಯಾಗಿದ್ದಾರೆ. ಇನ್ನು ಮಧ್ಯರಾತ್ರಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ಕೂಡ ನಡೆದಿದೆ.

ಇಂದು ಮಾರ್ಚ್ 20ರ ಬೆಳಗ್ಗೆ ದೇವಿಯ ರಥಾರೋಹಣವಾಗಿದ್ದು, ರಥವು ಬಿಡಕಿ ಬಯಲಿನ ಜಾತ್ರಾ ಗದ್ದುಗೆ ಸ್ಥಳಕ್ಕೆ ತೆರಳಲಿದೆ. ಅಲ್ಲಿ ಮಧ್ಯಾಹ್ನ ಗುದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪನೆಯಾಗಲಿದ್ದು, ನಾಳೆಯಿಂದ ಮಾರಿಕಾಂಬೆಗೆ ಸೇವೆ ಸಲ್ಲಿಕೆ, ಹರಕೆ ಅರ್ಪಣೆ ಪ್ರಾರಂಭವಾಗಲಿದೆ.
ಮಾ.21ರಂದು ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆ ಸ್ವೀಕಾರ ಆರಂಭವಾಗಲಿದ್ದು, ಮಾ.27ರಂದು ಬೆಳಗ್ಗೆ 10.41ಕ್ಕೆ ಜಾತ್ರಾ ಮುಕ್ತಾಯವಾಗಲಿದೆ. ದೇವಿ ಜಾತ್ರಾ ಗದ್ದುಗೆಯಿಂದ ಏಳುವುದರಿಂದ ಏಪ್ರಿಲ್ 9 ರಂದು ಬೆಳಗ್ಗೆ ಯುಗಾದಿ ಪ್ರತಿಷ್ಠೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ತಿಳಿಸಿದೆ.

ಶಿರಸಿಯ ಮಾರಿಕಾಂಬಾ ಜಾತ್ರೆಯ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳ ವಿವರ
ಮಾರಿಕಾಂಬಾ ಜಾತ್ರೆಗೆ ಸ್ಥಳೀಯರು ಮಾತ್ರವಲ್ಲದೇ ರಾಜ್ಯದ ಮೂಲೆ ಮೂಲೆಯಿಂದಲೂ ಲಕ್ಷಾಂತರ ಭಕ್ತ ಸಾಗರವೇ ಹರಿದು ಬರುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯ ಅಂಗವಾಗಿ ಸುಮಾರು ಮೂರು ತಿಂಗಳಿನಿಂದಲೂ ಧಾರ್ಮಿಕ ಕಾರ್ಯಗಳು ನಡೆಯುತ್ತಲೇ ಇದೆ. ಜಾತ್ರೆಯ ಅಂಗವಾಗಿ ಜನವರಿ 31 ರಂದು ಬೆಳಿಗ್ಗೆ 11.21ಕ್ಕೆ ಶ್ರೀ ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಕಾರ್ಯ ನಡೆಯುವುದರೊಂದಿಗೆ ಜಾತ್ರೆಯ ಕಾರ್ಯಕ್ರಮಗಳು ಆರಂಭಗೊಂಡಿದ್ದವು.
ಫೆ.27ರಂದು ರಾತ್ರಿ 9ಗಂಟೆ ನಂತರ ಮೊದಲನೇ ಹೊರಬೀಡು(ಪೂರ್ವ ದಿಕ್ಕಿಗೆ), ಮಾ.1ರಂದು ರಾತ್ರಿ 9ಗಂಟೆ ನಂತರ ಎರಡನೇ ಹೊರಬೀಡು (ಉತ್ತರ ದಿಕ್ಕಿಗೆ) ಮಾ.5ರಂದು ರಾತ್ರಿ 9ಗಂಟೆ ನಂತರ ಮೂರನೇ ಹೊರಬೀಡು (ಪೂರ್ವ ದಿಕ್ಕಿಗೆ), ಮಾ.8ರಂದು ಮಧ್ಯಾಹ್ನ ರಥಕ್ಕೆ ಪೂಜಾರಿ, ಆಚಾರಿ ಮತ್ತು ಬಡಗಿಯವರಿಂದ ವೃಕ್ಷ ಪೂಜೆ, ಮಾ.8ರಂದು ರಾತ್ರಿ 9ಗಂಟೆ ನಂತರ ನಾಲ್ಕನೇ ಹೊರಬೀಡು (ಉತ್ತರ ದಿಕ್ಕಿಗೆ), ಮಾ.12ರಂದು ಬೆಳಿಗ್ಗೆ ಶ್ರೀದೇವಿ ರಥದ ಮರ ತರುವುದು, ಮಾ.12ರಂದು ರಾತ್ರಿ 9.45ರ ನಂತರ ಅಂಕೆಯ ಹೊರಬೀಡು (ಪೂರ್ವ ದಿಕ್ಕಿಗೆ), ಮಾ.13ರಂದು ಮಧ್ಯಾಹ್ನ ಅಂಕೆ ಹಾಕುವುದು ಹಾಗೂ ಶ್ರೀದೇವಿಯ ವಿಗ್ರಹ ವಿಸರ್ಜನೆಯಂತಹ ಧಾರ್ಮಿಕ ಕಾರ್ಯಗಳು ನಡೆದಿದ್ದವು.











Click it and Unblock the Notifications