ನನಗೆ ಸಂಬಂಧಿಸಿದ ಸಿ.ಡಿ ಇದ್ದರೆ ಬಿಡುಗಡೆ ಮಾಡಿ: ಬಿಜೆಪಿ ನಾಯಕರಿಗೆ HDK ಸವಾಲ್
ನನ್ನ ಸಿಡಿ ಬಿಡುಗಡೆ ಮಾಡುವುದಾದರೆ ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ ಹಾಗೂ ನಾನು ಸಹಾಯ ಮಾಡಿದ ಸಿ.ಡಿ ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರವಾರದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರ, ಫೆಬ್ರವರಿ, 09: ನನ್ನ ಸಿಡಿ ಬಿಡುಗಡೆ ಮಾಡುವುದಾದರೆ ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ ಹಾಗೂ ನಾನು ಸಹಾಯ ಮಾಡಿದ ಸಿ.ಡಿ ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾರವಾರದಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಸಿ.ಡಿ ಬಿಡುಗಡೆ ಮಾಡುವುದಾಗಿ ಬಿಜೆಪಿ ಮುಖಂಡರ ಹೇಳಿಕೆ ವಿಚಾವಾಗಿ ಕುಮಟಾದಲ್ಲಿ ಅವರು ಪ್ರತಿಕ್ರಿಯಿಸಿದರು. ನನ್ನ ಯಾವ ಸಿ.ಡಿ ಇದೆಯಂತೆ? ಯಾವ ಸಿಡಿ ಬಿಡುಗಡೆ ಮಾಡುತ್ತಾರೆ? ಅವರ ಬಳಿ ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ. ನನ್ನ ಸಿ.ಡಿ ಬಿಡುಗಡೆ ಮಾಡುವುದಾದರೆ, ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ ಹಾಕು ನಾನು ಸಹಾಯ ಮಾಡಿದ ಸಿ.ಡಿ ಬಿಡುಗಡೆ ಮಾಡಬೇಕಷ್ಟೇ. ಅವರಂತೆ ಸ್ಟೇ ತರುವಂತಹ ಯಾವುದೇ ಸಿ.ಡಿಗಳಿಲ್ಲ. ನನ್ನ ಸಿ.ಡಿ ಬಿಡುಗಡೆ ಮಾಡಲು ಯಾವುದೇ ಪ್ರಕರಣಗಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ವೀರಶೈವ, ದಲಿತ ಎಲ್ಲಾ ಸಮುದಾಯಕ್ಕೂ ಗೌರವ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ನಾನು ಶಿವಾಜಿ ಮಹಾರಾಜರು, ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ವಂಶಾವಳಿಯ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಕೆಲವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರವರೇ ತಮಗೆ ಬೇಕಾದ ಹಾಗೆ ಅರ್ಥ ಮಾಡಿಕೊಂಡು ಸಲ್ಲದ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಬಿಜೆಪಿ ವಿರುದ್ಧ ಎಚ್.ಡಿ.ಕೆ ಆಕ್ರೋಶ
ಆರ್. ಅಶೋಕ್ ಕುಮಾರಸ್ವಾಮಿ ಬ್ರಿಟೀಷರ ರೀತಿ ಒಡೆದಾಳುವ ನೀತಿ ಮಾಡುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ನಾವು ಒಡೆದಾಳುವ ನೀತಿ ಮಾಡಿಲ್ಲ. ನಾವು ಒಡೆಸಿಕೊಂಡಿದ್ದೇವೆ. ಒಡೆಯುವ ಕೆಲಸ ಬಿಜೆಪಿಗರು ಮಾಡಿದ್ದಾರೆ. ಕಟ್ಟುವ ಕೆಲಸ ನಾವು ಮಾಡುತ್ತಿದ್ದೇವೆ. ಬ್ರಾಹ್ಮಣ ಹೇಳಿಕೆ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರವರೇ ಅರ್ಥ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಟ್ವೀಟ್ ಮಾಡಿ ಉತ್ತರ ಕೊಡುತ್ತೇನೆ. ನನ್ನ ಪ್ರಶ್ನೆಗೆ ಯಾರು ಉತ್ತರ ಕೊಟ್ಟಿಲ್ಲ. ಟ್ವಿಟ್ ಮಾಡಿ ಈ ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದರು.

BSY ರಾಜಕೀಯ ಅಂದೇ ಕೊನೆಗೊಳ್ಳುತ್ತಿತ್ತು
ಬಿ.ವೈ. ವಿಜಯೇಂದ್ರ ನೀಡಿರುವ ಪ್ರತಿಕ್ರಿಯೆ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ನಾನು, ಯಡಿಯೂರಪ್ಪ ಜೊತೆ ಕೈ ಜೋಡಿಸದಿದ್ದರೆ ಅವರು ರಾಜಕೀಯವಾಗಿ ಅಂದೇ ಮುಗಿದು ಹೋಗುತ್ತಿದ್ದರು. ಆಗ ಈ ವಿಜಯೇಂದ್ರ ಎಲ್ಲಿದ್ದರು? ಒಂದು ದಿನ ನನಗೆ ಯಡಿಯೂರಪ್ಪ ಅವರ ಆಪ್ತ ಸಿದ್ದಲಿಂಗಸ್ವಾಮಿ ಚೀಟಿ ತಂದುಕೊಟ್ಟರು. ಅದನ್ನು ಕಳುಹಿಸಿದ್ದವರು ಯಡಿಯೂರಪ್ಪ. ಹೇಗಾದರೂ ಮಾಡಿ ಸರ್ಕಾ ರಚನೆ ಮಾಡಿ ತಮ್ಮನ್ನು ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ನಾಯಕತ್ವ ಇರಲಿ. ಒಂದು ವೇಳೆ ನೀವು ಪಕ್ಷದಿಂದ ಆಚೆ ಬಂದರೆ ನಿಮ್ಮ ರಾಜಕೀಯ ಜೀವನ ಮುಗಿದು ಹೋಗುತ್ತದೆ ಎಂದು ಕಿವಿಮಾತು ಹೇಳಿದ್ದೆ ಎಂದರು.

ಬಿಜೆಪಿಗರನ್ನ ಗೌರವದಿಂದ ಕಂಡಿದ್ದೇನೆ
ವೀರಶೈವರಿಗೆ ನಾನು ಏನೆಲ್ಲಾ ಒಳ್ಳೆಯದು ಮಾಡಿದ್ದೇನೆ ಎನ್ನುವುದು ವಿಜಯೇಂದ್ರ ಗೆ ಗೊತ್ತಿಲ್ಲ. 2006ರಲ್ಲಿ ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಬರುವುದಕ್ಕೆ ಮುನ್ನ ನಮ್ಮ ತಂದೆಯವರು ಸೋನಿಯಾ ಗಾಂಧಿ ಅವರ ಜೊತೆ ಚರ್ಚೆ ನಡೆಸಿ ವಿಧಾನಸಭೆ ವಿಸರ್ಜನೆಯ ಯೋಚನೆ ಮಾಡಿದ್ದರು. ಆಗ ಯಡಿಯೂರಪ್ಪ ಅವರ ಜೊತೆ ಸೇರಿ ಸರ್ಕಾರ ಮಾಡಿದೆವು. ಅಧಿಕಾರದಲ್ಲಿ ಇದ್ದ ವೇಳೆ ಬಿಜೆಪಿಗರನ್ನು ನಾನು ಅತ್ಯಂತ ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರ ಆಗಿತ್ತು. ಆದರೆ, ಪೇಶ್ವೆ ವಂಶವಾಹಿಗಳು ಅವರನ್ನು ಎಡೆಬಿಡದೆ ಕಾಡಿದರು. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟಪಟ್ಟು ಅವರು ಸಿಎಂ ಆದರು. ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ನನಗಿಂತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.

ಹೊಲದಲ್ಲಿ ತೆನೆ ಇದ್ದರೆ "ಕೈ"ಗೆ ಕೆಲಸ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತೆನೆ ಹೊಲದಲ್ಲಿ ಇರಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಹೊಲದಲ್ಲಿ ತೆನೆ ಇದ್ದರೆ ಕೈಗೆ ಕೆಲಸ ಸಿಗುತ್ತದೆ. ಕೈ ನಾಡಿನ ಜನತೆಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರೇಖೆ ಅಳಿಸಿದ್ದಾರೆ. ಕಾಂಗ್ರೆಸ್ ವಿಫಲವಾಗಿದ್ದಕ್ಕೆ ಕೈ ಮೇಲೆ ಜನರು ರೇಖೆ ಎಳೆದಿದ್ದಾರೆ. ತೆನೆ ಜನರನ್ನು ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ. ಕಾರ್ಯಕ್ರಮಕ್ಕೆ 2.5 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ. ಅನುಭವದ ಮೇಲೆ ಲೆಕ್ಕಾಚಾರ ಮಾಡಿ ಹಣ ಸರಿದೂಗಿಸಲು ಈ ಕಾರ್ಯಕ್ರಮ ಜಾರಿಮಾಡಲು ಜೆಡಿಎಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಬೇಕಾಗಿದೆ. ಜನ ಆಶೀರ್ವಾದ ಮಾಡಿದರೆ ನೆಮ್ಮದಿ ಜೀವನ ಮಾಡುವುದನ್ನು ಸಾಬೀತುಪಡಿಸಿ ತೋರಿಸುತ್ತೇನೆ ಎಂದು ಹೇಳಿದರು.
ಚಂದಾವರದಲ್ಲಿ ದೇವಸ್ಥಾನ, ದರ್ಗಾ, ಚರ್ಚ್‌ಗೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಪರ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು. ಚಂದಾವರ ಸೀಮೆ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಝರತ್ ಮದನ್ ಹಝರತ್ ಉಸ್ಮಾನ್ ಶಾಹ ವಲಿ ಅಲ್ಲಾಹ್ ದರ್ಗಾಕ್ಕೆ ಭೇಟಿ ನೀಡಿದಾಗ ಕುಮಾರಸ್ವಾಮಿ ಪರವಾಗಿ ಮೌಲಾನಾ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಬಳಿಕ ಚಂದಾವರದ ಸಂತ ಫ್ರಾನ್ಸಿನ್ ಕ್ಸೇವಿಯರ್ ಚರ್ಚ್‌ಗೆ ಭೇಟಿ ನೀಡಿದ ಕುಮಾರಸ್ವಾಮಿ ಚರ್ಚ್‌ನಲ್ಲಿ ಯೇಸುವಿನ ಬಳಿ ಪ್ರಾರ್ಥನೆ ಸಲ್ಲಿಸಿದರು.











Click it and Unblock the Notifications