ಮುಂಬೈನಿಂದ ಮಂಗಳೂರಿಗೆ 2 ಕೋಟಿ ಸಾಗಣೆ, ಯುವಕ ಬಂಧನ
ಕಾರವಾರ, ಜೂನ್ 9: ರೈಲಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ನಗದನ್ನು ರೈಲ್ವೆ ರಕ್ಷಣಾ ದಳ ಜಪ್ತಿ ಮಾಡಿದೆ. ಓರ್ವ ಯುವಕನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆಗೆ ಪ್ರಕರಣವನ್ನು ಹಸ್ತಾಂತರ ಮಾಡಲಾಗಿದೆ.
ರೈಲು ಸಂಖ್ಯೆ 12133 ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಅಪರಿಚಿತ ಯುವಕನೊಬ್ಬ ಬ್ಯಾಗ್‌ನೊಂದಿಗೆ ಕೆಲವು ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ.
ಈ ಬಗ್ಗೆ ರೈಲ್ವೆ ಟಿಕೆಟ್ ಪರೀಕ್ಷಕರು ವಿಚಾರಿಸಿದರೂ ಸರಿಯಾಗಿ ಉತ್ತರಿಸದಿದ್ದಾಗ ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದಾರೆ. ಆರ್‌ಪಿಎಫ್ ಸಿಬ್ಬಂದಿ ರೈಲು ಕಾರವಾರ ನಿಲ್ದಾಣಕ್ಕೆ ಬಂದಾಗ ಅನುಮಾನಿತನ ಬ್ಯಾಗ್ ತಪಾಸಣೆ ನಡೆಸಿದ್ದು, ಈ ವೇಳೆ ಬ್ಯಾಗ್ ನಲ್ಲಿ 2 ಕೋಟಿ. ರೂ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

22 ವರ್ಷದ ಚೇನ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ರಾಜಸ್ಥಾನದ ಜಲೋರ್ ನ ನಿವಾಸಿ ಎಂದು ಗುರುತಿಸಲಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಈತನನ್ನು ಬ್ಯಾಗ್ ತೆರೆಯಲು ಹೇಳಿದರೆ ಮೊದಲು ನಿರಾಕರಿಸಿದ್ದಾನೆ. ನಂತರ ಬ್ಯಾಗಿನಲ್ಲಿ ದುಡ್ಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಸಿದಾಗ ಮುಂಬೈನ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬಾತನ ಬಳಿ ರೂ.15,000 ಮಾಸಿಕ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಹಣವನ್ನು ಮಂಗಳೂರಿನಲ್ಲಿರುವ ರಾಜು ಎನ್ನುವವರಿಗೆ ತಲುಪಿಸಲು ಒಯ್ಯುತ್ತಿರುವುದ್ದೇನೆ ಎಂದು ತಿಳಿಸಿದ್ದಾನೆ.
ಜಪ್ತಿಪಡಿಸಿಕೊಂಡ ರೂ. 2 ಕೋಟಿ ರೂಪಾಯಿ ನಗದನ್ನು ಬ್ಯಾಗ್ ಸಹಿತ ವಶಪಡಿಸಿಕೊಂಡಿದ್ದು, ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications