ಹಳಿಯಾಳ; ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸ್ನೇಹಿತನ ರುಂಡ ಕತ್ತರಿಸಿದ
ಕಾರವಾರ, ಏಪ್ರಿಲ್ 13: ಸ್ನೇಹಿತನ ಸೋದರನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದ್ದು, ಈ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ನಾಲ್ಕು ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಏಪ್ರಿಲ್ 4 ರಂದು ಬೆಳವಟಗಿಯ ನಾಗರಾಜ್ ಕೊಳದಾರ (31) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು. ಆದರೆ ಇವರ ಮೃತದೇಹ ಏಪ್ರಿಲ್ 7 ರಂದು ಬೆಳವಟಗಿಯ ಅರಣ್ಯ ಪ್ರದೇಶದ ಬಳಿಯ ಹಳ್ಳವೊಂದರಲ್ಲಿ ರುಂಡವಿಲ್ಲದೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಹಳಿಯಾಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಬಳಿಕ ಸಿಪಿಐ ಬಿ.ಎಸ್.ಲೋಕಾಪುರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ಪೊಲೀಸರು ಮೃತ ನಾಗರಾಜ್ ಸ್ನೇಹಿತ, ಅದೇ ಗ್ರಾಮದ ಮಾದಪ್ಪಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.

ಆರೋಪಿ ಮಾದಪ್ಪಗೌಡ ನಾಗರಾಜ್ ಸಹೋದರನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ನಾಗರಾಜ್ ಅಡ್ಡಿ ಎಂದು ಭಾವಿಸಿದ್ದನು. ಹೀಗಾಗಿ ಕಟ್ಟಿಗೆ ತೆಗೆದುಕೊಂಡು ಬರಲು ಹೋಗೋಣವೆಂದು ಕಾಡಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.












Click it and Unblock the Notifications