ಕಾರವಾರ: ಕೈ ಹಿಡಿದ ನರೇಗಾ ಯೋಜನೆ: ಸ್ವಾವಲಂಬಿ ಬದುಕಿಗೆ ನೆರವಾದ ಕೋಳಿ ಶೆಡ್ ..!
ಕಾರವಾರ, ನವೆಂಬರ್ 20: ಕರಾವಳಿ ಭಾಗದಲ್ಲಿ ಕೆಲವೆಡೆ ರೈತರ ಕೃಷಿ ಭೂಮಿ ಇದ್ದರೂ ಇಲ್ಲದಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಇಲ್ಲಿನ ರೈತರು ಕೂಲಿ ಮಾಡಿಯೇ ಜೀವನ ಸಾಗಿಸುತ್ತಾರೆೆ. ಕೂಲಿಯೊಂದಿಗೆ ಪ್ರಾಣಿ-ಪಕ್ಷಿಗಳನ್ನು ಸಾಕುವುದು ಸಹಜವಾಗಿರುತ್ತದೆ. ಆದರೆ ಕೆಲವು ಕುಟುಂಬಗಳು ಇದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆದು ಮಾದರಿಯಾಗಿದ್ದಾರೆ.
ಅಂಕೋಲಾ ತಾಲೂಕಿನ ಬೆಳಾಂಬರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ 13ಕ್ಕೂ ಹೆಚ್ಚು ಕೋಳಿ ಶೇಡ್‌ಗಳು ನಿರ್ಮಾಣವಾಗಿದ್ದು, ಫಲಾನುಭವಿಗಳಿಗೆ ಉತ್ತಮ ಆದಾಯದ ಮೂಲವಾಗಿದೆ.

ಸಾಮಾನ್ಯವಾಗಿ ಬಹುತೇಕ ಹಳ್ಳಿಗಳಲ್ಲಿ ಕೂಲಿನಾಲಿ ಮಾಡಿ ಬದುಕುವವರೆ ಹೆಚ್ಚು. ಇಂತಹ ಕೆಲಸದ ಜೊತೆ ಜೊತೆಗೆ ಕೋಳಿ, ಆಡು, ಮೇಕೆಗಳ ಸಾಕಣೆ ಕೂಡ ಮಾಡಲಾಗುತ್ತದೆ. ಆದರೆ ಇಂತಹ ಕಸುಬಿಗೂ ಇದೀಗ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಪರಿಣಾಮ ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಜಾಬ್ವಕಾರ್ಡ್ ಹೊಂದಿದವರು ಇಂತಹ ಸೌಲಭ್ಯ ಪಡೆದುಕ್ಕೊಳ್ಳಲು ಸಹಕಾರಿಯಾಗಿದೆ.
ಇನ್ನು ಈ ಬಗ್ಗೆ ಫಲಾನುಭವಿಗಳನ್ನು ಕೇಳಿದಾಗ ಕಳೆದ 30 ವರ್ಷಗಳಿಂದಲೂ ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಳಿ ಶೆಡ್ ನೀಡಿರುವುದು ನಮ್ಮ ಕೋಳಿ ಸಾಕಣಿಕೆಗೆ ನೆರವಾಗಿದೆ. ಇದರಿಂದ ಹೆಚ್ಚು ಹೆಚ್ಚು ಕೋಳಿ ಸಾಕಲು ಸಹಕಾರಿಯಾಗಲಿದೆ. ಅಲ್ಲದೆ ಉತ್ತಮ ಆದಾಯ ಕೂಡ ಗಳಿಸಬಹುದು ಎಂದು ಫಲಾನುಭವಿ ಗಂಗೆ ಗೌಡ ಖುಷಿ ಹಂಚಿಕೊಂಡಿದ್ದಾರೆ.
ನಮ್ಮಲ್ಲಿ ಪ್ಯಾರೇಟ್ ನೋಸ್, ಕೋಚಿಯಂತಹ ಉತ್ತಮ ಕೋಳಿ ತಳಿಗಳಿದ್ದು, ಜೋಡಿ ಮರಿಗೆ 1000-2000ರೂಗೆ ಮಾರಾಟವಾಗುತ್ತದೆ. ಬೆಳೆದ ಕೋಳಿಗಳು 2000ದಿಂದ 5000ರೂವರೆಗೂ ಮಾರಾಟವಾಗುತ್ತದೆ. ಕೋಳಿಶೆಡ್ ನಿರ್ಮಾಣವಾದ್ದರಿಂದ ಮಳೆ ಗಾಳಿಯಿಂದ ನಮ್ಮ ಕೋಳಿಗಳು ಸುರಕ್ಷಿತವಾಗಿವೆ ಎಂದು ಫಲಾನುಭವಿ ಮಂಜುನಾಥ ಗೌಡ ಹೇಳಿದ್ದಾರೆ
ನರೇಗಾ ಯೋಜನೆಯಡಿ 60 ಸಾವಿರ ರೂ ವೆಚ್ಚದಲ್ಲಿ 2021-22ನೇ ಸಾಲಿನಲ್ಲಿ 10 ಹಾಗೂ 2022-23ನೇ ಸಾಲಿನ 7 ಕೋಳಿಶೆಡ್‌ಗಳು ನಿರ್ಮಾಣಗೊಂಡಿವೆ. ಇನ್ನೂ ಕೋಳಿಗಳಿಗೆ ಮಾರುಕಟ್ಟೆ ವ್ಯವಸ್ಥೆ ನೋಡುವುದಾದರೆ ನೇರವಾಗಿ ಮನೆಗಳಿಗೆ ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಾರೆ. ಅಲ್ಲದೆ ಈ ಕೋಳಿಗಳು ನಾಟಿ ತಳಿಗಳಾಗಿದ್ದು, ಇಲ್ಲಿನ ಪರಿಸರಕ್ಕೆ ಒಗ್ಗಿಕೊಂಡಿರುತ್ತವೆ. ಇದರಿಂದ ಬೇಡಿಕೆಗಳು ಹೆಚ್ಚಾಗಿರುವ ಕಾರಣ ರೈತರು ಇದನ್ನು ಕೂಡ ಕೃಷಿಯೊಂದಿಗೆ ಉದ್ಯೋಗವನ್ನಾಗಿಸಿಕೊಂಡಿದ್ದಾರೆ.
ಸ್ವಾವಲಂಭಿ ಜೀವನಕ್ಕೆ ಸಾಕ್ಷಿ..!
ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಜಮೀನಿನಲ್ಲಿ ತೋಟಗಾರಿಕೆ, ರೇಷ್ಮೆ ಬೆಳೆ ಮತ್ತು ಕೃಷಿ ಅರಣ್ಯ ಪ್ರದೇಶ ವಿಸ್ತರಿಸಿಕೊಳ್ಳಲು, ಮಣ್ಣಿನ ಸವಕಳಿ ತಡೆದು ಮಳೆ ನೀರನ್ನು ಸಂರಕ್ಷಿಸಲು ಕಂದರ ಬದು ಕೃಷಿಹೊಂಡ ನಿರ್ಮಿಸಿಕೊಳ್ಳಬಹುದು. ಅಲ್ಲದೆ ಕೋಳಿ, ಕುರಿ, ಹಂದಿ ಶೆಡ್ ಹಾಗೂ ದನದ ಕೊಟ್ಟಿಗೆಯಂತಹ ಕಾಮಗಾರಿ ನಡೆಸಬಹುದಾಗಿದೆ.
ಉದ್ಯೋಗ ಚೀಟಿ ಹೊಂದಿದ ನೋಂದಾಯಿತ ಪ್ರತಿ ಕುಟುಂಬಕ್ಕೆ ಜೀವಿತಾವಧಿಯಲ್ಲಿ ರೂ. 2.50 ಲಕ್ಷ ದವರೆಗೆ ಆರ್ಥಿಕ ನೆರವು ಪಡೆಯಲು ಅವಕಾಶ ಇರುತ್ತದೆ. ಇದರಿಂದ ಉದ್ಯೋಗ ಖಾತರಿ ಕಾಮಗಾರಿಗಳು ಸಾರ್ವಜನಿಕರಿಗೆ ಹೊಸ ಭರವಸೆ ಮೂಡಿಸುತ್ತಿವೆ. ಈ ಕಾಮಗಾರಿಗಳು ಅದೆಷ್ಟೋ ಕುಟುಂಬಗಳ ಸ್ವಾವಲಂಬನೆಗೆ ಸಾಕ್ಷಿಯಾಗಿವೆ ಎನ್ನುತ್ತಾರೆ ಜಿ.ಪಂ. ಸಿಒಓ ಈಶ್ವರ ಕಾಂದೂ.












Click it and Unblock the Notifications