ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ವರ್ಷದ ಮೊದಲ ದಿನ ದೇವರ ದರ್ಶನಕ್ಕೆ ಭಕ್ತ ಸಾಗರ
ಕಾರವಾರ, ಜನವರಿ 01: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮುಗಿಲುಮುಟ್ಟಿದೆ. ಹೊಸ ವರ್ಷದ ಮೊದಲ ದಿನ ಉತ್ತರ ಕನ್ನಡದ ದೇವಸ್ಥಾನಗಳಿಗೆ ಭಕ್ತರ ದಂಡೆ ಹರಿದುಬರುತ್ತಿದೆ. ಗೋಕರ್ಣ, ಮುರುಡೇಶ್ವರ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದೊಡ್ಡ ಸರದಿ ಸಾಲೇ ನಿರ್ಮಾಣವಾಗಿದೆ.
ಎಲ್ಲೆಡೆ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಗೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬಂದಿದ್ದು ಇಂದು ಪ್ರಮುಖವಾಗಿ ಗೋಕರ್ಣ, ಮುರ್ಡೇಶ್ವರ ದೇವಸ್ಥಾನಗಳಲ್ಲಿ ಭಕ್ತರ ಸಾಲು ದೊಡ್ಡದಾಗಿರುವುದು ಕಂಡುಬಂತು. ಹೊಸ ವರ್ಷದ ಮೊದಲ ದಿನವೇ ಪುರಾಣ ಪ್ರಸಿದ್ಧ ಶಿವನ ಆತ್ಮಲಿಂಗವಿರುವ ಗೋಕರ್ಣ ಕ್ಷೇತ್ರದಲ್ಲಿ ಆತ್ಮಲಿಂಗ ಸ್ಪರ್ಶಿಸಿ ಸಾವಿರಾರು ಮಂದಿ ಪೂಜೆ ಸಲ್ಲಿಸಿದರು. ಇನ್ನು ಮುರುಡೇಶ್ವರದಲ್ಲಿಯೂ ಭಕ್ತರು ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ತೆರಳುತ್ತಿರುವುದು ಕಂಡುಬಂತು.

ಟ್ಯಾಗೋರ ಕಡಲತೀರದಲ್ಲಿ ಸಂಗೀತದಲ್ಲಿ ತೇಲಾಡಿದ ಜನ!
ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸಿಂಗರ್ ನಚಿಕೇತ್ ಲೀಲೆ ಹಾಗೂ ಮಿಸ್ಮಿ ಬೋಸ್ ಒಂದು ಗಂಟೆವರೆಗೂ ನೆರೆದಿದ್ದ ಸಾವಿರಾರು ಮಂದಿಯನ್ನು ತಮ್ಮ ಗಾನಸುಧೆಯಿಂದ ಕುಣಿದು ಕುಪ್ಪಳಿಸುವಂತೆ ಮಾಡಿದರು. ಅಲ್ಲದೆ ಸ್ಥಳೀಯ ಕಲಾವಿದರಿಂದಲೂ ಆಕರ್ಷಕ ನೃತ್ಯ ಹಾಗೂ ಗಾಯನ ನಡೆಯಿತು.
ಶಾಸಕ ಸತೀಶ್ ಸೈಲ್ ಡಾನ್ಸ್
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಶಾಸಕ ಸತೀಶ್ ಸೈಲ್, ನ್ಯಾಯಾಧೀಶರು ಭಾಗವಹಿಸಿದ್ದರು. ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿಂಗರ್ ನಚಿಕೇತ್ ಹಾಡಿಗೆ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ಟೇಪ್ ಹಾಕಿ ಸಂಭ್ರಮಿಸಿದರು. ಸ್ಟೇಜ್ ಎದುರು ಯುವಕರು ಸೇರಿದಂತೆ ಶಾಸಕರೂ ಕೂಡ ಕುಣಿದು ಹೊಸ ವರುಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.
ಕಡಲ ತೀರದಲ್ಲಿ ಪ್ರವಾಸಿಗರ ದಂಡು
ಸಂಜೆಯಾಗುತ್ತಿದ್ದಂತೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಕಳೆಗಟ್ಟಿತ್ತು. ಸ್ಥಳೀಯರಲ್ಲದೇ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ತೀರದಲ್ಲಿ ಜಮಾಯಿಸಿದ್ದರು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದರು. ಕೆಂಪು ಸೂರ್ಯನ ಸೊಬಗನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಜೊತೆಗೆ ಕೆಲವರು ಒಟ್ಟಾಗಿ ನಿಂತು ಸೆಲ್ಫಿ ಕ್ಲಿಕ್ಕಿಸಿದರು.

ಹೊಸ ವರ್ಷಕ್ಕೆ ಸಿಹಿ ಹಂಚಿ ಸಂಭ್ರಮ
ರಜಾ ದಿನವಾಗಿದ್ದ ಭಾನುವಾರ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸ್ನೇಹಿತರು, ಹಿತೈಸಿಗಳೊಟ್ಟಿಗೆ ಬೆಳಿಗ್ಗೆಯಿಂದಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ದತೆಯಲ್ಲಿ ತೊಡಗಿದ್ದರು. ಸಂಜೆಯಾಗುತ್ತಿದ್ದಂತೆ ಕಡಲತೀರದಲ್ಲಿ ಸೇರಿದ ಜನರು ಎಲ್ಲೆಡೆ ಪಟಾಕಿ ಸಿಡಿಸುತ್ತಿರುವುದು ಕಂಡುಬಂತು. ಅಲ್ಲದೆ ಕೆಲ ಭಾಗಗಳಲ್ಲಿ ಮಕ್ಕಳಿಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಆಗಮಿಸಿ ಕೆಕ್ ಕತ್ತರಿಸಲು ಅಣಿಯಾಗಿದ್ದರು. ಸಂಜೆ ಹೊತ್ತಿಗೆ ನಗರದ ಹೋಟೆಲ್ ಹಾಗೂ ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿತ್ತು. ನಗರದ ವಿವಿಧ ಇಲಾಖೆಯ ಪ್ರವಾಸಿ ಮಂದಿರಗಳು ಕೂಡ ಭರ್ತಿಯಾಗಿತ್ತು.
ಇನ್ನು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗೋವಾ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರು ಅಲ್ಲಿ ಹೋಟೆಲ್ ಹಾಗೂ ರೆಸಾರ್ಟ್‌ಗಳ ಕೊಠಡಿಗಳು ಭರ್ತಿಯಾಗಿರುವುದರಿಂದ ವಸತಿ ವ್ಯವಸ್ಥೆ ಸಿಗದೇ ಜಿಲ್ಲೆಯತ್ತ ಮುಖ ಮಾಡಿದ್ದರು. ಇದರಿಂದ ನಗರದ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಬಹುತೇಕ ಹೋಟೆಲ್‌ಗಳ ಕೊಠಡಿಗಳು ಭರ್ತಿಯಾಗಿದ್ದವು. ಹೊಸ ವರ್ಷಾಚರಣೆಗೆಂದೇ ಪ್ರವಾಸಿಗರ ಸ್ನೇಹಿತರ ಸಹಕಾರದಲ್ಲಿ ತಿಂಗಳ ಮುಂಚೆಯೇ ಮುಂಗಡವಾಗಿ ಕೊಠಡಿಗಳನ್ನು ಕಾದಿರಿಸಿದ್ದು, ಕೊನೆ ಹಂತದಲ್ಲಿ ಪ್ರವಾಸ ಕೈಗೊಂಡವರು ವಸತಿಗಾಗಿ ಪರದಾಡುತ್ತಿರುವುದು ಕಂಡು ಬಂತು.

ಇನ್ನು ಕೆಲವು ಕಡೆಗಳಲ್ಲಿ ಕೆಲ ಯುವತಿಯರ ಗುಂಪು ತಮಗೆ ಸೂಕ್ತವೆನಿಸಿದ ಸ್ಥಳಗಳಲ್ಲಿ ಸರಳವಾಗಿ ಪಾರ್ಟಿಗಳನ್ನು ನಡೆಸಿದರೆ, ಇನ್ನು ಕೆಲವರು ತಮ್ಮ ಮನೆಯ ಓಣಿಗಳಲ್ಲಿ ಡಿ.ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಕುಟುಂಬದವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದರ ಜೊತೆ, ಇಷ್ಟದ ತಿಂಡಿಗಳನ್ನು ತಿಂದು ಸಂಭ್ರಮಿಸಿದರು.












Click it and Unblock the Notifications