New year 2024: ಕಾರವಾರ ಕಡಲತೀರದಲ್ಲಿ ಹೊಸ ವರ್ಷಕ್ಕೆ ಭಾರೀ ಸಿದ್ಧತೆ- ಭಾಗವಹಿಸುವವರಿಗೆ ಮಾಹಿತಿ ಇಲ್ಲಿದೆ
ಕಾರವಾರ, ಡಿಸೆಂಬರ್ 14: 2023 ವರ್ಷ ಮುಗಿಯಲು ಇನ್ನೇನು ಕೆಲವು ದಿನಗಳಲ್ಲೇ ಬಾಕಿಯಿದ್ದು, ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ಜೋರಾಗಿದೆ. ಕಡಲನಗರಿ ಕಾರವಾರದಲ್ಲಿ ಕೊರೊನಾ ಕಾರಣದಿಂದಾಗಿ ಕಳೆದ ಮೂರು ವರ್ಷವೂ ಕಳೆಗುಂದಿದ್ದ ಹೊಸ ವರ್ಷ ಸಂಭ್ರಮಾಚರಣೆಗೆ ಈ ಬಾರಿ ಜಿಲ್ಲಾಡಳಿತವೇ ಬಣ್ಣ ಹಚ್ಚಲು ಮುಂದಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು "ಈ ಬಾರಿ ಹೊಸ ವರ್ಷವನ್ನು ಸ್ವಾಗತಿಸಲು ಕಡಲತೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಸ್ಟಾಲ್ ಅಮ್ಯೂಸ್ಮೆಂಟ್ ಪಾರ್ಕ್ ಇಡಲು ಈಗಾಗಲ ಸಿದ್ಧತೆ ನಡೆಸಲಾಗಿದೆ. ಕನಿಷ್ಠ ಪ್ರವೇಶ ಶುಲ್ಕ ಇಟ್ಟು ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಕಾರ್ಯಕ್ರಮದ ರೂಪುರೇಷ ಸಿದ್ದಪಡಿಸುವುದಾಗಿ" ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಡಲತೀರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ
"ಕಾರವಾರ ನಗರದ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ಸ್ವಚ್ಛತೆ ಮಾಡುವ ಯಂತ್ರ ಹಾಳಾದ ಕಾರಣ ಕಳೆದ ಕೆಲ ದಿನಗಳಿಂದ ಸ್ವಚ್ಛತೆ ಇಲ್ಲದೆ ಕಡಲತೀರದ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿತ್ತು. ಆದರೆ ಪುಣೆಯಿಂದ ಎಂಜಿನಿಯರ್ ಕರೆಸಿ ಯಂತ್ರವನ್ನು ದುರಸ್ತಿಗೊಳಿಸಿದ್ದು, ಈ ಯಂತ್ರದ ಮೂಲಕ ಪ್ರತಿದಿನ ಬೀಚ್‌ಅನ್ನು ಸ್ವಚ್ಛಗೊಳಿಸುವ ಮೂಲಕ ಬೀಚ್‌ನಲ್ಲಿ ನೈರ್ಮಲ್ಯ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಅಲ್ಲದೆ ಗೋಕರ್ಣ ಹಾಗೂ ಮುರುಡೇಶ್ವರದ ಕಡಲತೀರದಲ್ಲಿಯೂ ಸ್ವಚ್ಛ ಮಾಡುವ ಕಾರ್ಯ ಮಾಡಲಾಗುವುದು" ಎಂದರು.
ಇದೇ ಸಂದರ್ಭದಲ್ಲಿ ಬೀಚ್‌ನಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಬೀಚ್‌ನಲ್ಲಿ ಸಿ.ಆರ್.ಜಡ್ ನಿಯಮಗಳ ಉಲ್ಲಂಘನೆ ಆಗದಂತೆ ಶೌಚಾಲಯ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸವರ್ಷಾಚರಣೆ
ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಊರುಗಳಿಂದ ಬಂದ ಪ್ರವಾಸಿಗರು ಕೂಡ ಉತ್ತರ ಕನ್ನಡ ಜಿಲ್ಲಾಡಳಿತ ಆಯೋಜಿಸಿರುವ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿಯಾಬಹುದಾಗಿದೆ. ಪ್ರವಾಸಿಗರು ಜಿಲ್ಲಾಡಳಿದ ನಿಯಮಾನುಸಾರ ಭಾಗಿಯಾಗಬಹುದಾಗಿದೆ. ಈ ಬಾರಿ ಹೊಸ ವರ್ಷ ಸೋಮವಾರ ಬಿಂದಿದ್ದು, ಶುಕ್ರವಾರ ಸಂಜೆಯೇ ಪ್ರವಾಸಿ ತಾಣಗಳಿಗೆ ಹೊರಟರೆ ಮೂರು ದಿನ ಹೊಸ ವರ್ಷದ ಆಚರಣೆಯನ್ನು ಮಾಡಬಹುದಾಗಿದೆ.

ಹೊಸ ವರ್ಷ ಆಚರಣೆಗೆ ಉತ್ತರ ಕನ್ನಡ ಜಿಲ್ಲೆಗೆ ಬರುವವರು ಕಾರವಾರದ ಸಮುದ್ರ ತಟದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿಕೊಂಡು, ಮಾರನೇ ದಿನ ಮುರುಡೇಶ್ವರ, ಗೋಕರ್ಣ, ಯಾಣ, ದಾಂಡೇಲಿ, ಕಾಳಿ ನದಿ, ಶರಾವತಿ ಹಿನ್ನೀರು, ಅಪ್ಸರಕೊಂಡ ಜಲಪಾತ , ವಿಭೂತಿ ಜಲಪಾತ, ಭೀಮಕೋಲ್, ಸಾಥೋಡಿ ಜಲಪಾತ, ನಾದಿಭಾಗ್ ಬೀಚ್, ಮಾಗೋಡು ಜಲಪಾತ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು.












Click it and Unblock the Notifications