ಇಂದಿನಿಂದ ಮಂಗಳೂರು-ಮಡಂಗಾವ್ ವಂದೇ ಭಾರತ್ ಸಂಚಾರ ಆರಂಭ: ಕಾರವಾರದಲ್ಲಿ ಸ್ವಾಗತಕ್ಕೆ ಸಕಲ ಸಿದ್ಧತೆ
ಕಾರವಾರ, ಡಿಸೆಂಬರ್ 30: ಇಂದಿನಿಂದ ಅಂದರೆ ಡಿಸೆಂಬರ್ 30ರಿಂದ ಮಂಗಳೂರುನಿಂದ ಮಡಗಾಂವ್‌ಗೆ ಆರಂಭಗೊಳ್ಳುವ ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿಸೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಡುವ ಈ ರೈಲು ಮಧ್ಯಾಹ್ನ 2.52ಕ್ಕೆ ಕಾರವಾರ ರೈಲ್ವೆ ನಿಲ್ದಾಣ ತಲುಪಲಿದೆ. ಇಲ್ಲಿ ವಂದೇ ಭಾರತ್ ರೈಲನ್ನು ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ವಿವಿಧ ಸಾಂಸ್ಕೃತಿಕ ಕಲಾ ವೈಭವಗಳ ಮೂಲಕ ಸ್ವಾಗತಿಸಲಾಗುವುದು. ನಂತರ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಮಡಗಾಂವ್‌ಗೆ ತೆರಳಿಲಿದೆ.

ಪ್ರಾರಂಭದ ದಿನದಂದು ಈ ರೈಲಿನಲ್ಲಿ ಕಾರವಾರದಿಂದ ಮಡಂಗಾವ್‌ಗೆ ತೆರಳಲು ಮತ್ತು ವಾಪಸ್ ಕಾರವಾರಕ್ಕೆ ಆಗಮಿಸಲು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಕಾರವಾರದ ಹಿರಿಯ ಪ್ರಾದೇಶಿಕ ಇಂಜಿನಿಯರ್ ಬಿ.ಎಸ್ ನಾಡಗೆ ತಿಳಿಸಿದ್ದಾರೆ.
ಈ ರೈಲು ಗಂಟೆಗೆ 120 ಕಿಲೋ ಮೀಟರ್‌ಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್‌ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್‌ಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ.

ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದ್ದು, ಬೆಳಗ್ಗೆ 11ಕ್ಕೆ ಮಂಗಳೂರುನಿಂದ ಹೊರಟು 12.25ಕ್ಕೆ ಉಡುಪಿ, 2.52ಕ್ಕೆ ಕಾರವಾರ 4.40 ಕ್ಕೆ ಮಡಂಗಾವ್ ತಲುಪಲಿದೆ. ಮಡಗಾಂವ್ ನಿಂದ ಸಂಜೆ 5.10ಕ್ಕೆ ಹೊರಟು, 5.50ಕ್ಕೆ ಕಾರವಾರ, 8.10ಕ್ಕೆ ಉಡುಪಿ, 10.15 ಕ್ಕೆ ಮಂಗಳೂರು ತಲುಪಲಿದೆ. ಮಾರ್ಗಮಧ್ಯೆ ಕಾರವಾರ ಮತ್ತು ಉಡುಪಿ ಹೊರತುಪಡಿಸಿ ಬೇರೆಲ್ಲೂ ನಿಲುಗಡೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ದೇಶವಿಡೀ ವಂದೇ ಭಾರತ್ ಓಡಾಟ ನಡೆಸಿದರೂ ಮಂಗಳೂರಿಗೆ ವಂದೇ ಭಾರತ್ ಭಾಗ್ಯವನ್ನು ಕೇಂದ್ರ ಸರ್ಕಾರ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ವಂದೇ ಭಾರತ್ ಸೇವೆಗಳ ಆರಂಭಕ್ಕಾಗಿ ಮನವಿ ಮಾಡಿದ್ದರು. ಅದರಂತೆ ಇಂದಿನಿಂದ ಮಂಗಳೂರುನಿಂದ ಮಡಗಾಂವ್‌ಗೆ ವಂದೇ ಭಾರತ್ ಎಕ್ಸಪ್ರೆಸ್ ರೈಲು ಸಂಚಾರ ನಡೆಸಲಿದೆ.











Click it and Unblock the Notifications