ಕಳೆಗುಂದಿದ ಮಕರ ಸಂಕ್ರಾಂತಿ: ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಕುಸಿತ
ಕಾರವಾರ, ಜನವರಿ 14: ಕೊರೊನಾ ವೈರಸ್ ನಿಂದಾಗಿ ಈ ಬಾರಿ ಮಕರ ಸಂಕ್ರಾಂತಿಯ ಸಂಭ್ರಮ ಕಳೆಗುಂದಿದೆ. ಸಂಕ್ರಾಂತಿ ಕಾಳಿನ ಮಾರಾಟದಲ್ಲಂತೂ ಸಂಪೂರ್ಣ ಇಳಿಕೆ ಕಂಡುಬಂದಿದೆ.
ಇಷ್ಟು ವರ್ಷ ಸಂಕ್ರಾಂತಿ ಬಂತೆಂದರೆ ಬಗೆಬಗೆಯ ಸಂಕ್ರಾಂತಿ ಕಾಳುಗಳು ಮಾರುಕಟ್ಟೆಗೆ ಬರುತ್ತಿದ್ದವು. ಬಣ್ಣ ಬಣ್ಣದ ಕಾಳುಗಳು, ಶೇಂಗಾ ಸಂಕ್ರಾಂತಿ ಹೀಗೆ ವಿವಿಧ ತೆರನಾದ ಕಾಳುಗಳು ಮಾರಾಟವಾಗುತ್ತಿದ್ದವು. ಗ್ರಾಹಕರು ಕೂಡ ಹಬ್ಬದ ದಿನಕ್ಕೂ ಒಂದು ದಿನ ಮುಂಚಿತವಾಗಿಯೇ ಹೆಚ್ಚಿನ ಸಂಕ್ರಾಂತಿ ಖರೀದಿ ಮಾಡುತ್ತಿದ್ದರು. ಆದರೆ ಈ ಬಾರಿ ಹಬ್ಬದ ಸಂಭ್ರಮ ಕಾಣದಾಗಿದೆ.
ಸಂಕ್ರಾಂತಿ ವಿಶೇಷ: ಉತ್ತರ ಕನ್ನಡದಲ್ಲಿ ಜಾತ್ರೋತ್ಸವಗಳ ಆರಂಭದ ಪುಣ್ಯಕಾಲ
ಪ್ರತಿ ಬಾರಿಯೂ ಸಂಕ್ರಾಂತಿ ಬಂತೆಂದರೆ ಅಂದು ಸಂಕ್ರಾಂತಿ ಕಾಳನ್ನು ಹೆಚ್ಚು ಖರೀದಿಸುವವರು ಶಾಲಾ-ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಖರೀದಿ ಮಾಡಿದ ಕಾಳನ್ನು ಶಾಲಾ-ಕಾಲೇಜಿಗೆ ಕೊಂಡೊಯ್ದು ತಮ್ಮ ಸ್ನೇಹಿತರು, ಉಪನ್ಯಾಸಕರಿಗೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಸಂಕ್ರಾಂತಿ ಕಾಳಿನ ಮಾರಾಟ ವಿದ್ಯಾರ್ಥಿಗಳ ಮೇಲೆ ನಿಂತಿತ್ತು. ಈ ಬಾರಿ ಶಾಲಾ-ಕಾಲೇಜು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಿಲ್ಲ. ಹೀಗಾಗಿ ಸಂಕ್ರಾಂತಿ ಕಾಳು ಖರೀದಿ ಮಾಡುವವರೇ ಇಲ್ಲದಾಗಿದೆ.
ಮಾರಾಟಗಾರರ ಪ್ರಕಾರ, ಈ ಬಾರಿ 100 ಗ್ರಾಂ ಸಂಕ್ರಾಂತಿ ಕಾಳು ಮಾರಾಟವಾದರೆ ಹೆಚ್ಚಂತೆ! ಈ ಮೊದಲೆಲ್ಲ ಕೆಜಿಗಟ್ಟಲೆ ಸಂಕ್ರಾಂತಿ ಕಾಳು ಖರೀದಿ ಮಾಡುತ್ತಿದ್ದರು. ವಿದ್ಯಾರ್ಥಿಗಳು ಕೂಡ ಒಂದಕ್ಕಿಂತ ಹೆಚ್ಚು ಪ್ಯಾಕೆಟ್ ಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈಗ ಬರುವವರು 50, 100 ಗ್ರಾಂ ಸಂಕ್ರಾಂತಿ ಮಾತ್ರ ಖರೀದಿ ಮಾಡುತ್ತಿದ್ದಾರೆ. ಕೋವಿಡ್ ಎನ್ನುವುದು ವ್ಯಾಪಾರಸ್ಥರಿಗೆ ಭಾರೀ ಹೊಡೆತ ನೀಡಿದೆ ಎನ್ನುತ್ತಿದ್ದಾರೆ.
ದರ ಹೀಗಿದೆ
ಸಂಕ್ರಾಂತಿ ಕಾಳುಗಳ 10, 20 ರೂ.ಗಳ ಪ್ಯಾಕೆಟ್ ಮಾರುಕಟ್ಟೆಯಲ್ಲಿದೆ. ಜೊತೆಗೆ ಎಳ್ಳುಂಡೆಯ 20ರ ಪ್ಯಾಕೆಟ್ ಗೆ 40 ರೂ. ಇದೆ. ಇನ್ನು, ತರಕಾರಿಗಳಲ್ಲಿ ಟೊಮ್ಯಾಟೊ ಕಿಲೋಗೆ 20, ಈರುಳ್ಳಿ, ಕ್ಯಾರೆಟ್, ಆಲೂಗಡ್ಡೆ, ಬೀಟ್ರೂಟ್ 40, ಬೀನ್ಸ್ 50 ರೂ. ಇದೆ. ಇನ್ನು ಹಣ್ಣುಗಳಲ್ಲಿ ಚಿಕ್ಕು, ಮೂಸಂಬಿ ಕಿಲೋಗೆ 80, ಕಿತ್ತಳೆ 50, ದ್ರಾಕ್ಷಿ, ಸೇಬು 120 ರೂ. ಇದೆ.