ದೇವಾಲಯ ವಶಪಡಿಸಿಕೊಳ್ಳುವುದು, ನ್ಯಾಯಾಂಗಕ್ಕೆ ಸರಕಾರ ಮಾಡಿದ ಅಪಚಾರ
ಬೆಂಗಳೂರು, ಸೆ 20: ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ, ಉತ್ತರಕನ್ನಡದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯನ್ನು ಸರಕಾರ ವಶಪಡಿಸಿಕೊಂಡಿದೆ.
ಸರಕಾರದ ಈ ಕ್ರಮ ಘನ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧವಾಗಿ ರಾಮಚಂದ್ರಾಪುರ ಮಠ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಶ್ರೀಮಠ ಸಲ್ಲಿಸಿದ್ದ ಅರ್ಜಿಯನ್ನು ಸೆ. 7ರಂದು ಮಾನ್ಯ ಮಾಡಿದ್ದ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಸೂಚಿಸಿ, ದೇವಾಲಯದ ಆಡಳಿತ ನಿರ್ವಹಣೆಯನ್ನು ಶ್ರೀಮಠವೇ ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿತ್ತು.

ಸರ್ವೋಚ್ಚ ನ್ಯಾಯಾಲಯದ ಮಾನ್ಯ ಮುಖ್ಯನ್ಯಾಯಮೂರ್ತಿಗಳ ಆದೇಶವನ್ನೇ ಸರಕಾರವೇ ಉಲ್ಲಂಘಿಸಿದರೆ ನ್ಯಾಯವನ್ನು ಎಲ್ಲಿ ಹುಡುಕುವುದು? ಶ್ರೀಮಠದ ಆಡಳಿತವು ಅಬಾಧಿತವಾಗಿ ಒಂದು ತಿಂಗಳು ಮುಂದುವರಿಯುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶದ ಮೂಲಕ, ಆ ಆದೇಶವೇ ಮುಂದುವರಿಯಬೇಕು ಎಂದು ಆದೇಶಿಸಿತ್ತು.
ಶ್ರೀಮಠಕ್ಕೆ ನೀಡಿದ ಕಾನೂನಿನ ರಕ್ಷಣೆ ಹೊರತಾಗಿಯೂ, ಕಾನೂನು ಬಾಹಿರವಾಗಿ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ವಶಕ್ಕೆ ಪಡೆದಿರುವ ಸರಕಾರದ ಹೇಯ ಕ್ರಮ ನ್ಯಾಯಾಂಗಕ್ಕೆ ಸರ್ಕಾರಿ ವ್ಯವಸ್ಥೆ ಮಾಡುತ್ತಿರುವ ಅಪಚಾರವಾಗಿದ್ದು, ಈ ಕುರಿತಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀಮಠ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದೆ ಎಂದು ರಾಮಚಂದ್ರಾಪುರ ಮಠ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೈಕೋರ್ಟ್ ಆದೇಶದ ಮೇರೆಗೆ ಗೋರ್ಕಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರೂ ಅಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬುಧವಾರ ( ಸೆ 19) ವಹಿಸಿಕೊಂಡಿದ್ದರು.












Click it and Unblock the Notifications